Sidlaghatta : ಶಿಡ್ಲಘಟ್ಟ ನಗರದಲ್ಲಿ ಗೌರಿ ಗಣೇಶ ಮತ್ತು ಈದ್ ಮಿಲಾದ್ ಹಬ್ಬವನ್ನು ಶಾಂತಿ ಹಾಗೂ ಸೌಹಾರ್ದತೆಯಿಂದ ಆಚರಿಸಬೇಕೆಂದು ಡಿ ವೈ ಎಸ್ ಪಿ ಪಿ. ಮುರಳಿಧರ್ ತಿಳಿಸಿದರು.
ನಗರದಲ್ಲಿ ಗೌರಿ ಗಣೇಶ ಮತ್ತು ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಕಾನೂನು ಸುವ್ಯಸ್ಥೆ ಕಾಪಾಡುವ ಸಲುವಾಗಿ ಮತ್ತು ನಾಗರಿಕರಲ್ಲಿ ಧೈರ್ಯ ತುಂಬಿಸಲು ಪಥ ಸಂಚಲನ ನಡೆಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಚಳುವಳಿಯಲ್ಲಿ ಗೌರಿ ಗಣೇಶದ ಹಬ್ಬವನ್ನು ಹೋರಾಟದ ಕಿಚ್ಚು ಹಚ್ಚಿಸಲು ಆಚರಿಸಲಾಗುತ್ತಿತ್ತು. ಅದೇ ರೀತಿ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮದಿನಾಚರಣೆಯನ್ನು ಮುಸ್ಲಿಂ ಸಮಾಜದವರು ಈದ್ ಮಿಲಾದ್ ಆಚರಿಸುತ್ತಿದ್ದಾರೆ. ಉಭಯ ಸಮುದಾಯದವರು ಶಾಂತಿ ಸೌಹಾರ್ದತೆಯಿಂದ ಕಾನೂನು ಸುವ್ಯವಸ್ಥೆ ಕಾಪಾಡಿಕೊಂಡು ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಬೇಕೆಂದರು.
ಶಿಡ್ಲಘಟ್ಟ ನಗರದ ಟಿಬಿ ರಸ್ತೆ, ಅಶೋಕ ರಸ್ತೆ, ವಾಸವಿ ರಸ್ತೆ, ಗಾರ್ಡನ್ ರಸ್ತೆ, ಸಾರಿಗೆ ಬಸ್ ನಿಲ್ದಾಣ ಇನ್ನಿತರೆ ಪ್ರಮುಖ ಬೀದಿಗಳಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಪಥಸಂಚಲ ನಡೆಸಿದರು.
ಈ ಸಂದರ್ಭದಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಎಂ.ಶ್ರೀನಿವಾಸ್, ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯ ಪಿ.ಎಸ್.ಐ ವೇಣುಗೋಪಾಲ್ ಮತ್ತು ಸಿಬ್ಬಂದಿ ಹಾಜರಿದ್ದರು.







