Sidlaghatta : ಶಿಡ್ಲಘಟ್ಟ ತಾಲ್ಲೂಕಿನ ತಹಸೀಲ್ದಾರ್ ಗ್ರೇಡ್ 2 ಆಗಿ ವರ್ಷಗಳಿಂದ ದಕ್ಷತೆಯಿಂದ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದ ಪೂರ್ಣಿಮಾ.ವಿ ರವರನ್ನು ಗ್ರೇಡ್ 1 ತಹಸೀಲ್ದಾರ್ ಆಗಿ ಮಂಚೇನಹಳ್ಳಿ ತಾಲೂಕಿಗೆ ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಶಿಡ್ಲಘಟ್ಟ ತಾಲೂಕು ವ್ಯಾಪ್ತಿಯ ನಾಲಕ್ಕೂ ಹೋಬಳಿಗಳಲ್ಲೂ ಎಲೆ ಮರಿ ಕಾಯಿಯಂತೆ ಕುದ್ದು ತಾವೇ ಪಿಂಚಣಿ ಆದಾಲತ್ ಮೂಲಕ ಹಿರಿಯ ನಾಗರೀಕರಿಗೆ ಪಿಂಚಣಿ ಸೇರಿದಂತೆ ಸುಮಾರು ವರ್ಷಗಳಿಂದ ನಿಂತು ಹೋಗಿದ್ದ ವೃದ್ಧಪ್ಯಾ ವೇತನ ವಿವಿಧ ಮಾಶಾಸನ ಹಾಗೂ ಸರಕಾರದ ಯೋಜನೆಗಳ ಕುರಿತು ಹಳ್ಳಿಗಳಲ್ಲಿ ಅರಿವು ಮೂಡಿಸುವ ಮೂಲಕ ಗ್ರಾಮೀಣ ಭಾಗದ ಹಿರಿಯ ನಾಗರೀಕರ ವಿಶ್ವಾಸವನ್ನು ಗಳಿಸಿದ್ದ ಅಧಿಕಾರಿಯಾಗಿದ್ದರು.
ಜೊತೆಗೆ ಸರಕಾರಿ ಕೆಲಸ ದೇವರ ಕೆಲಸ ಎಂದೇ ಪ್ರಾಮಾಣಿಕ ತಾಲೂಕು ಅಭಿವೃದ್ಧಿಯಲ್ಲಿ ಮಗ್ನರಾಗಿರುವ ಪೂರ್ಣಿಮಾ ಇವರು ಆದಾಲತ್ ಕಾರ್ಯಕ್ರಮಗಳಲ್ಲಿ ಅನೇಕ ಮಹಿಳೆ ಯರಿಗೆ ಹಾಗೂ ವೃದ್ಧರಿಗೆ ಪಿಂಚಣಿ ಸೌಲಭ್ಯಗಳನ್ನು ಒದಗಿಸುವುದಲ್ಲದೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಇನ್ನಿತರೆ ಪ್ರಮಾಣ ಪತ್ರಗಳನ್ನು ನೀಡುವಲ್ಲಿ ಪ್ರಾಮಾಣಿಕವಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಯಾವುದೇ ಒಂದು ಪ್ರಮಾಣ ಪತ್ರ ನೀಡಲು ಸೂಕ್ತ ಹಾಗೂ ಅರ್ಹ ದಾಖಲೆಗಳಿಲ್ಲದಿದ್ದರೆ ಯಾವುದೇ ಮುಲಾಜಿ ಇಲ್ಲದೆ ತಿರಸ್ಕರಿಸಿ ತಮ್ಮ ಪ್ರಾಮಾಣಿಕತೆಯನ್ನು ಎತ್ತಿ ಹಿಡಿದ್ದಾರೆ.
ಸರಕಾರದ ಭೂ ಸುರಕ್ಷಾ ಯೋಜನೆಯಲ್ಲಿ ಏ ಮತ್ತು ಬಿ ವರ್ಗದ ಭೂ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ತಹಸೀಲ್ದಾರ್ ಕಚೇರಿಯಲ್ಲಿ ವಿತರಣೆ ಮಾಡುವಲ್ಲಿ ವಿಶೇಷವಾಗಿ ಗಮನ ಸೆಳೆದರೂ ಜಾತಿ ಮತ್ತು ಆದಾಯ ಪತ್ರ ಹಾಗೂ ವಿವಿಧ ಕಂದಾಯ ದಾಖಲೆಗಳನ್ನು ಪಡೆಯಲು ಪ್ರತಿ ನಿತ್ಯ ಸಾವಿರಾರು ಜನರು ತಾಲೂಕು ಕಚೇರಿಯತ್ತ ಅಲೆದಾಡಬೇಕಿತ್ತು.
ಆದರೆ ಇವರು ಸಾರ್ವಜನಿಕರ ಅಲೆದಾಟವನ್ನು ತಪ್ಪಿಸುವ ನಿಟ್ಟಿನಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ವಿಭಿನ್ನವಾಗಿ ತಮ್ಮ ಅವಧಿಯಲ್ಲಿ ಕಡಿಮೆ ಸಮಯದಲ್ಲಿ ತ್ವರಿತ ದಾಖಲೆಗಳನ್ನು ಪಡೆಯಲು ಸಮಯದ ವೇಳಾ ಪಟ್ಟಿಯನ್ನು ನಿಗದಿ ಮಾಡುವ ಮೂಲಕ ವ್ಯವಸ್ಥಿತವಾಗಿ ಆಡಳಿತ ಸುಧಾರಣೆಯನ್ನು ಮಾಡಿದರು.
ಒಟ್ಟಾರೆ ತಹಸೀಲ್ದಾರ್ ಗ್ರೇಡ್ 2 ಆಗಿ ತಮ್ಮ ಕರ್ತವ್ಯವನ್ನು ಅತ್ಯಂತ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಣೆ ಮಾಡುವ ಮೂಲಕ ಜನಸ್ನೇಹಿ ವಾತಾವರಣವನ್ನು ಸೃಷ್ಟಿಸಿದ ಇವರ ಕಾರ್ಯವೈಖರಿಗೆ ಸ್ಥಳೀಯ ದಲಿತ ಪರ, ರೈತಪರ, ಕನ್ನಡ ಪರ ಸಂಘಟನೆಗಳ ಮುಖಂಡರು ಸೇರಿದಂತೆ ಸುಮಾರು ತಿಂಗಳುಗಳಿಂದ ನಿಂತು ಹೋಗಿದ್ದ ಪಿಂಚಣಿಯ ಸದುಪಯೋಗಪಡಿಸಿಕೊಂಡ ಹಿರಿಯನಾಗರೀಕರು ಸದುಪಯೋಗ ಮೆಚ್ಚುಗೆಯ ಜೊತೆಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ .