Sidlaghatta : ಸಮಾಜದಲ್ಲಿ ಏನಾದರೂ ಸಾಮಾಜಿಕ ಕ್ರಾಂತಿ, ಉತ್ತಮ ಬದಲಾವಣೆ, ಅಭಿವೃದ್ದಿ ಕಂಡರೆ ಅದರ ಹಿಂದೆ ವಿದ್ಯಾರ್ಥಿ ಮತ್ತು ಯುವಜನರ ಪಾತ್ರ ಬಹಳಷ್ಟಿರುತ್ತದೆ. ಈ ವಿದ್ಯಾರ್ಥಿ, ಯುವಜನರನ್ನು ಸರಿದಾರಿಯಲ್ಲಿ ಸಾಗುವಂತೆ ಮಾಡುವಲ್ಲಿ ತಾಯಂದಿರ ಪಾತ್ರ ಹಿಂದೆಂದಿಗಿಂತಲೂ ಇದೀಗ ಹೆಚ್ಚು ಮುಖ್ಯವಾಗಿದೆ ಎಂದು ಆದಿಚುಂಚನಗಿರಿ ಮಹಾ ಸಂಸ್ಥಾನ ಪೀಠಾಧಿಪತಿ ಶ್ರೀನಿರ್ಮಲಾನಂದನಾಥ ಮಹಾಸ್ವಾಮೀಜಿ ತಿಳಿಸಿದರು.
ನಗರದ ಹೊರವಲಯದ ಶಿಡ್ಲಘಟ್ಟ-ಚಿಕ್ಕಬಳ್ಳಾಪುರ ಮಾರ್ಗದ ಹಂಡಿಗನಾಳ ಬಳಿಯ ಶ್ರೀಬಾಲಾಜಿ ಕನ್ವೆಂಷನ್ ಹಾಲ್ ನಲ್ಲಿ ಹಮ್ಮಿಕೊಂಡಿದ್ದ “ಗುರು ಪೂರ್ಣಿಮೆ” ಹಾಗೂ “ಸತ್ಸಂಗ” ಕಾರ್ಯಕ್ರಮದಲ್ಲಿ ನೆರೆದಿದ್ದ ಭಕ್ತರಿಗೆ ಅವರು ಆಶೀರ್ವಚನ ನೀಡಿದರು.
ಮಕ್ಕಳೊಂದಿಗೆ ತಂದೆಗಿಂತಲೂ ತಾಯಿಯಾದವಳು ಹೆಚ್ಚು ಒಡನಾಟ ಇಟ್ಟುಕೊಂಡಿರುತ್ತಾಳೆ. ಮಕ್ಕಳ ಚಲನ ವಲನದ ಮೇಲೆ ಹೆಚ್ಚು ನಿಗಾಯಿಡುವುದು ಕೂಡ ತಾಯಿಯೆ. ಹೆಚ್ಚು ಮಕ್ಕಳು ಅನುಕರಣೆ ಮಾಡುವುದು ಕೂಡ ತಾಯಿಯನ್ನೇ ಆದ ಕಾರಣ ಮಕ್ಕಳನ್ನು ಸರಿಯಾದ ದಾರಿಯಲ್ಲಿ ಸಾಗುವಂತೆ ಮಾಡುವ ಹೊಣೆ ತಾಯಂದರಿಂದ ಆಗಬೇಕಿದೆ ಎಂದು ಹೇಳಿದರು.
ರಾಷ್ಟ್ರಕವಿ ಕುವೆಂಪು ಅವರು ಯುಗಕವಿಯಾಗಿ ಜಗದ ಕವಿಯಾಗಿ ಬೆಳೆಯಲು ಅವರ ತಾಯಿ ಹಾಕಿದ ಅಡಿಪಾಯ ಕಾರಣ. ಕುವೆಂಪು ಅವರ ತಾಯಿಗೆ ಓದು ಬರಹ ಬರುತ್ತಿರಲಿಲ್ಲ. ಆದರೆ ಕುವೆಂಪು ಅವರು ಸಾಕಷ್ಟು ಕಡೆ ನನ್ನ ಬೆಳವಣಿಗೆಯಲ್ಲಿ ನಮ್ಮ ತಾಯಿ ಪಾತ್ರ ಜಾಸ್ತಿ ಇದೆ ಎಂದಿದ್ದಾರೆ ಎಂದು ತಿಳಿಸಿದರು.
ಈ ಸಮಾಜದಲ್ಲಿ ಶಿಕ್ಷಣದ ಮಹತ್ವದ ಬಗ್ಗೆ ಹೆಚ್ಚು ಜಾಗೃತಿ ಮೂಡಿದೆ. ಹಾಗಾಗಿ ಪೋಷಕರು ತಮ್ಮ ಸಂಪಾದನೆಯ ಹೆಚ್ಚು ಭಾಗವನ್ನು ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಲೆಂದೆ ಖರ್ಚು ಮಾಡುತ್ತಾರೆ. ಈ ದಿನಗಳಲ್ಲಿ ಕೂಲಿ ಮಾಡುವ ವ್ಯಕ್ತಿ ಕೂಡ ತನ್ನಂತೆ ತನ್ನ ಮಕ್ಕಳು ಆಗಬಾರದೆಂದು ಉತ್ತಮ ವಿದ್ಯಾಭ್ಯಾಸ ನೀಡುವಂತಾಗಿದೆ ಎಂದು ಹೇಳಿದರು.
ನಮ್ಮ ಸಂಸ್ಕೃತಿಯಲ್ಲಿ ವ್ಯಾಸ ಪೂರ್ಣಿಮೆಗೆ ಹೆಚ್ಚಿನ ಮಹತ್ವ ಇದೆ. ಗುರು ಹಾಗೂ ಗುರಿ ಇಲ್ಲದೆ ಯಾವುದೇ ವ್ಯಕ್ತಿಗೆ ಮುಕ್ತಿ ಸಿಗುವುದಿಲ್ಲ. ಮನುಷ್ಯನ ಒಳ ಹಾಗೂ ಹೊರಗಿನ ವಿದ್ಯೆ ಫಲಪ್ರದ ಆಗಬೇಕಾದರೆ ಗುರುಗಳ ಮಾರ್ಗದರ್ಶನ ಬಹಳ ಮುಖ್ಯ ಎಂದರು.
ಈ ಜಿಲ್ಲೆಯು ಅನೇಕ ಸಾಧು, ಸಂತರು, ಶರಣರು ತಪಸ್ಸು ಮಾಡಿದ ಪುಣ್ಯ ಭೂಮಿ. ಆಧ್ಯಾತ್ಮಿಕತೆಯ ವಿಚಾರದಲ್ಲಿ ಅನೇಕ ಸಂಗತಿಗಳು ಜಿಲ್ಲೆಯಲ್ಲಿ ಮೇಳೈಸಿವೆ, ನಾವೆಲ್ಲರೂ ಆಧ್ಯಾತ್ಮಿಕತೆಯನ್ನು ಮೈಗೂಡಿಸಿಕೊಂಡು ಉತ್ತಮ ಬದುಕನ್ನಾಗಿಸಿಕೊಳ್ಳಬೇಕೆಂದರು.
ಮಠದ ಭಕ್ತರಾದ ಸಹನಾ ರಾಜೀವ್ ಗೌಡ, ರಾಣಿ ಸೀಕಲ್ ರಾಮಚಂದ್ರಗೌಡ ಮತ್ತು ಪಾಲುಣ್ಯ ಸಚಿನ್ ದಂಪತಿಗಳು ಸೇರಿದಂತೆ ಮಠದ ಅನೇಕ ಭಕ್ತರು ದಂಪತಿ ಸಮೇತ ಶ್ರೀಗಳಿಗೆ ಪುಷ್ಪಾರ್ಚನೆ ಮಾಡಿ ಪಾದಪೂಜೆ ಸಲ್ಲಿಸಿದರು. ನೂರಾರು ವಿದ್ಯಾರ್ಥಿಗಳು ಪೋಷಕರೊಂದಿಗೆ ಸತ್ಸಂಗ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀಗಳ ಆಶೀರ್ವಚನ ಪಡೆದರು.
ಆದಿಚುಂಚನಗಿರಿಯ ಚಿಕ್ಕಬಳ್ಳಾಪುರ ಶಾಖಾ ಮಠದ ಶ್ರೀ ಮಂಗಳಾನಂದನಾಥ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್, ಗೌರಿಬಿದನೂರು ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ, ಕೆಪಿಸಿಸಿ ಸಂಯೋಜಕ ಹಾಗೂ ಶಿಡ್ಲಘಟ್ಟದ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ, ಮಾಜಿ ಶಾಸಕ ರಾಜಣ್ಣ, ಒಕ್ಕಲಿಗರ ಸಂಘದ ಅಧ್ಯಕ್ಷ ಬಿ.ನಾರಾಯಣಸ್ವಾಮಿ, ಯುವ ಸೇನೆ ಅಧ್ಯಕ್ಷ ಜೆಎಸ್.ವೆಂಕಟಸ್ವಾಮಿ, ತಹಶೀಲ್ದಾರ್ ಗಗನ ಸಿಂಧು, ಹಿರಿಯ ವಕೀಲ ಪಾಪಿರೆಡ್ಡಿ, ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ಬಿಜಿಎಸ್ ಶಾಲೆಯ ಪ್ರಿನ್ಸಿಪಾಲ್ ಕೆ.ಮಹದೇವ್ ಸೇರಿದಂತೆ ಮಠದ ಭಕ್ತರು ಭಾಗವಹಿಸಿದ್ದರು.