Sidlaghatta : ಶಿಡ್ಲಘಟ್ಟ ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ಶ್ರೀ ಹಡಪದ ಅಪ್ಪಣ್ಣ ಜಯಂತ್ಯುತ್ಸವವನ್ನು ಆಚರಿಸಲಾಯಿತು. ರಾಷ್ಟ್ರಿಯ ಹಬ್ಬಗಳ ಆಚರಣಾ ಸಮಿತಿಯ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಹಡಪದ ಅಪ್ಪಣ್ಣನ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸುವ ಮೂಲಕ ಪೂಜೆ ಸಲ್ಲಿಸಲಾಯಿತು.
ತಹಶೀಲ್ದಾರ್ ಗಗನ ಸಿಂಧು ಮಾತನಾಡಿ, ಕಾಯಕವೇ ಪ್ರಧಾನ ಎಂಬುದು ಹಡಪದ ಅಪ್ಪಣ್ಣನ ಆದರ್ಶ. ಪ್ರತಿಯೊಬ್ಬರೂ ತಮ್ಮ ಕೆಲಸವನ್ನು ಪ್ರಾಮಾಣಿಕತೆ, ಶ್ರದ್ಧೆ ಮತ್ತು ಸಮರ್ಪಣೆಯಿಂದ ಮಾಡಿದರೆ ಅದು ಸಮೃದ್ಧ ಸಮಾಜ ನಿರ್ಮಾಣದ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗುತ್ತದೆ ಎಂದು ಹೇಳಿದರು.
ಅಪ್ಪಣ್ಣನವರು ತಮ್ಮ ವಚನಗಳ ಮೂಲಕ ನೈತಿಕ ಮೌಲ್ಯಗಳು, ಮಾನವೀಯತೆ, ಶ್ರಮದ ಹಾಗೂ ಸೇವಾ ಮನೋಭಾವನೆಯ ಮಹತ್ವವನ್ನು ಸಾಮಾಜಿಕ ಬದುಕಿಗೆ ದಾರಿದೀಪವಾಗಿ ತೋರಿದ್ದಾರೆ. ಇಂದಿನ ದಿನಗಳಲ್ಲಿ ಅವರ ಚಿಂತನೆಗಳು ಅವಶ್ಯಕವಾಗಿವೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ನರೇಂದ್ರ ಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ವಿದ್ಯಾ ವಸ್ತ್ರದ್, ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಮೇಲೂರು ಮಂಜುನಾಥ್, ಐ.ಎನ್. ಟಿ.ಯು.ಸಿ ರಾಜ್ಯ ಸಂಘಟನಾ ಕಾರ್ಯದರ್ಶಿ ಕುಂದಲಗುರ್ಕಿ ಮುನೀಂದ್ರ, ಸಾಂಸ್ಕೃತಿಕ ವಿಭಾಗದ ಪ್ರತಿನಿಧಿ ವೇಣು ಹಾಗೂ ಶಂಕರಣ್ಣ, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಕಚೇರಿ ಸಿಬ್ಬಂದಿ ಹಾಗೂ ನಾಗರಿಕರು ಹಾಜರಿದ್ದರು.