Hosapete, Sidlaghatta : ದ್ವಿತಳಿ ರೇಷ್ಮೆಗೂಡು ಉತ್ಪಾದನೆ ಮಾಡುವ ಕಡೆಗೆ ರೈತರು ಹೆಚ್ಚಿನ ಚಿಂತನೆ ನಡೆಸಬೇಕು. ಇದರಿಂದ ರೈತರು ಆರ್ಥಿಕವಾಗಿ ಸದೃಢರಾಗಲು ಸಹಕಾರಿಯಾಗುತ್ತದೆ ಎಂದು ಕೇಂದ್ರ ರೇಷ್ಮೆ ಮಂಡಳಿ ವಿಜಯಪುರದ ವಿಜ್ಞಾನಿ ಡಾ.ಪಿ.ಎಂ.ಮುನಿಶಾಮಿರೆಡ್ಡಿ ಹೇಳಿದರು.
ತಾಲ್ಲೂಕಿನ ಹೊಸಪೇಟೆ ಗ್ರಾಮದ ರೇಷ್ಮೆ ವಿಸ್ತರಣಾ ಕೇಂದ್ರದಲ್ಲಿ, ಕೇಂದ್ರ ರೇಷ್ಮೆ ಮಂಡಳಿ, ಮತ್ತು ರಾಜ್ಯ ರೇಷ್ಮೆ ಇಲಾಖೆಯ ಜಂಟಿ ಸಹಯೋಗದಲ್ಲಿ ಆಯೋಜಿಸಲಾಗಿದ್ದ ನನ್ನ ರೇಷ್ಮೆ ನನ್ನ ಹೆಮ್ಮೆ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನನ್ನ ರೇಷ್ಮೆ ನನ್ನ ಹೆಮ್ಮೆ ಎಂಬ ಮಹಾತಂತ್ರಜ್ಞಾನ ಹಂಚಿಕೆ ಅಭಿಯಾನವನ್ನು ಕೇಂದ್ರ ರೇಷ್ಮೆ ಮಂಡಳಿ ದೇಶವ್ಯಾಪ್ತಿ ಅಭಿಯಾನ ಆರಂಭಿಸಿದೆ. ಕೇಂದ್ರ ರೇಷ್ಮೆ ಮಂಡಳಿಯಿಂದ ಅಭಿವೃದ್ಧಿಪಡಿಸಲಾದ ಅತ್ಯಾಧುನಿಕ ತಂತ್ರಜ್ಞಾನಗಳು ಲಭ್ಯವಿದ್ದರೂ ರೇಷ್ಮೆ ಕೃಷಿ ರೈತರು ಇನ್ನೂ ಹಳೆಯ ಪದ್ಧತಿಗಳನ್ನೇ ಅವಲಂಬಿಸಿದ್ದಾರೆ. ಇದಕ್ಕೆ ಪ್ರಮುಖ ಕಾರಣ ತಂತ್ರಜ್ಞಾನಗಳ ಪರಿಚಯದ ಕೊರತೆಯಿದೆ. ಹಾಗಾಗಿ ರೈತರು ಇಂತಹ ತರಬೇತಿ ಕಾರ್ಯಾಗಾರಗಳಲ್ಲಿ ಸಿಕ್ಕುವಂತಹ ಮಾಹಿತಿಗಳನ್ನು ಹೆಚ್ಚಾಗಿ ಬಳಕೆ ಮಾಡಿಕೊಳ್ಳಬೇಕು ಎಂದರು
ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಅಕ್ಮಲ್ ಪಾಷ ಮಾತನಾಡಿ, ರೇಷ್ಮೆ ಉಧ್ಯಮದಲ್ಲಿ ರೈತರು, ಹೆಚ್ಚು ಲಾಭ ಗಳಿಸಲು ಸಾಕಷ್ಟು ಅವಕಾಶಗಳಿವೆ. ಚೀನಾದಿಂದ ಆಮದಾಗುತ್ತಿದ್ದ ರೇಷ್ಮೆಯ ಪ್ರಮಾಣ ಕಡಿಮೆಯಾಗಿದೆ. ಇತ್ತಿಚೆಗೆ ರೇಷ್ಮೆಗೂಡಿಗೂ ಉತ್ತಮ ಬೆಲೆಯಿದೆ. ರೈತರು, ಯಾವುದೇ ಕಾರಣಕ್ಕೂ ರೇಷ್ಮೆ ಉಧ್ಯಮದಿಂದ ಹಿಂದೆ ಸರಿಯಬಾರದು. ರಾಜ್ಯದಲ್ಲಿ ಪ್ರಮುಖ ಬೆಳೆಯಾಗಿ ರೇಷ್ಮೆ ಅನೇಕ ವರ್ಷಗಳಿಂದ ರೈತರ ಕೈ ಹಿಡಿಯುತ್ತಿದೆ. ಇಂತಹ ಸಂದರ್ಭದಲ್ಲಿ ರೈತರು ರೇಷ್ಮೆ ಬೆಳೆಗೆ ತಂತ್ರಜ್ಞಾನವನ್ನ ಜೋಡಿಸಿದರೆ ಮತ್ತಷ್ಟು ಲಾಭವನ್ನು ಪಡೆಯಬಹುದು. ಇಲಾಖೆಯಿಂದ ರೈತರಿಗೆ ಸಿಗುತ್ತಿರುವ ಎಲ್ಲಾ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ವಿಜ್ಞಾನಿಗಳು, ರೇಷ್ಮೆ ಬೆಳೆಗೆ ಬರುವಂತಹ ರೋಗಗಳು, ಅವುಗಳ ನಿವಾರಣೆಗೆ ಕೈಗೊಳ್ಳಬಹುದಾದ ಮಾರ್ಗೋಪಾಯಗಳ ಕುರಿತು, ರೈತರಿಗೆ ಮಾಹಿತಿ ನೀಡಿದರು.
ಡಾ.ಪರಮೇಶ್ ನಾಯಕ್, ಜಂಗಮಕೋಟೆ ರೇಷ್ಮೆ ವಿಸ್ತರಣಾ ಇನ್‌ಸ್ಪೆಕ್ಟರ್ ಸೋಮಣ್ಣ, ರೇಷ್ಮೆ ವಿಸ್ತರಣಾಧಿಕಾರಿ ಹರೀಶ್ ಗೌಡ, ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ರೇಷ್ಮೆ ಬೆಳೆಗಾರರು ಹಾಜರಿದ್ದರು.