20.9 C
Sidlaghatta
Saturday, October 11, 2025

ರಾಜಕಾಲುವೆಯಿಂದ ತೆಗೆದ ಹೂಳು ತ್ಯಾಜ್ಯ ಮಣ್ಣು ಗೌಡನ ಕೆರೆಗೆ

- Advertisement -
- Advertisement -

Sidlaghatta : ಶಿಡ್ಲಘಟ್ಟ : ನಗರದಲ್ಲಿನ ಶೆಟ್ಟಿಗುಣಿಯ ರಾಜಕಾಲುವೆ(ಟೋಲ್‌ ಗೇಟ್ ಬಳಿ ಹಾದು ಹೋಗುವ)ಗೆ ಸಿಮೆಂಟ್ ತಡೆಗೋಡೆ ನಿರ್ಮಿಸುವ ಕಾಮಗಾರಿ ನಡೆಯುತ್ತಿದ್ದು ರಾಜಕಾಲುವೆಯಿಂದ ತೆಗೆಯುತ್ತಿರುವ ತ್ಯಾಜ್ಯ ಮಣ್ಣು ಕಸ ಕಡ್ಡಿಯನ್ನು ಗೌಡನ ಕೆರೆಗೆ ತುಂಬಿಸಲಾಗುತ್ತಿದೆ.

ನಗರದಿಂದ ಟೋಲ್‌ ಗೇಟ್ ಮೂಲಕ ಗೌಡನೆಕೆರೆಗೆ ಸಂಪರ್ಕಿಸುವ ರಾಜಕಾಲುವೆಗೆ ನಗರೋತ್ಥಾನ ಹಂತ-4 ರ ಅನುದಾನದಲ್ಲಿ ತಡೆಗೋಡೆ ನಿರ್ಮಿಸುವ ಕಾಮಗಾರಿ ನಡೆಯುತ್ತಿದ್ದು ರಾಜಕಾಲುವೆಯಲ್ಲಿ ವರ್ಷಗಳಿಂದಲೂ ತುಂಬಿದ್ದ ತ್ಯಾಜ್ಯ, ಮಣ್ಣು ಕಸ ಕಡ್ಡಿಯನ್ನು ತೆಗೆದು ಗೌಡನಕೆರೆಗೆ ಸುರಿಯಲಾಗುತ್ತಿದೆ.

ರಾಜಕಾಲುವೆಯಿಂದ ತೆಗೆದ ತ್ಯಾಜ್ಯ ಮಣ್ಣನ್ನು ಸೂಕ್ತ ವಿಲೇವಾರಿ ಮಾಡಬೇಕಾದ ಗುತ್ತಿಗೆದಾರರು ಸಾಗಣೆ ವೆಚ್ಚ ಉಳಿಸಿಕೊಳ್ಳಲು ಸಮೀಪದಲ್ಲೆ ಇರುವ ಗೌಡನಕೆರೆಗೆ ತುಂಬಿಸಿ ಕೆರೆ ಪರಿಸರವನ್ನು ಹಾಳು ಮಾಡುತ್ತಿದ್ದಾರೆ. ನಗರಸಭೆ ಅಧಿಕಾರಿಗಳು ನೋಡಿಯೂ ನೋಡದಂತೆ ಕಣ್ಣು ಮುಚ್ಚಿ ಕುಳಿತಿದ್ದಾರೆ.

ಲೋಡುಗಟ್ಟಲೆ ತ್ಯಾಜ್ಯವನ್ನು ಕೆರೆಗೆ ಸುರಿಯುತ್ತಿದ್ದರೂ ತಾಲ್ಲೂಕು ಆಡಳಿತವೂ ನನಗೇನೂ ಸಂಬಂಧ ಇಲ್ಲ ಎನ್ನುವಂತೆ ಮೌನಕ್ಕೆ ಶರಣಾಗಿದೆ. ನಗರಸಭೆಯ ಹಣದಲ್ಲಿ ರಾಜಕಾಲುವೆಯ ಹೂಳು ತೆಗೆದು ಕೃಷಿ ಮತ್ತು ಕುಡಿಯುವ ನೀರಿನ ಜೀವ ನಾಡಿ ಕೆರೆಗೆ ತುಂಬಿಸಲಾಗುತ್ತಿದೆ.

ಕೆರೆಗೆ ಕಟ್ಟಡಗಳ ಅವಶೇಷ ತ್ಯಾಜ್ಯ ಮತ್ತು ರಾಜಕಾಲುವೆಯಿಂದ ತೆಗೆದ ಮಣ್ಣು ತ್ಯಾಜ್ಯವನ್ನು ಕೆರೆಗೆ ಸುರಿಯುತ್ತಿದ್ದನ್ನು ಕಂಡು ಸ್ಥಳದಲ್ಲಿದ್ದ ರೈತ ಸಂಘದ ಹಯ್ಯಾತ್ ಖಾನ್ ಟ್ರಾಕ್ಟರ್ ತಡೆದು ಗಲಾಟೆ ಮಾಡಿದ್ದಾರೆ. ಕೆರೆಗೆ ಮಣ್ಣನ್ನು ಸುರಿಯುವುದನ್ನು ವಿರೋಧಿಸಿದ್ದಾರೆ.

ಆಗ ರಾಜಕಾಲುವೆಯಲ್ಲಿ ಹೂಳು ಮಣ್ಣು ತೆಗೆದು ಕೆರೆಗೆ ತುಂಬಿಸುತ್ತಿದ್ದ ಗುತ್ತಿಗೆದಾರ ಕೆ.ಬಿ.ಮಂಜುನಾಥ್ ಸ್ಥಳಕ್ಕೆ ಬಂದು, ಶಾಸಕ ರವಿಕುಮಾರ್ ಅವರೆ ಇಲ್ಲಿ ಮಣ್ಣು ಹಾಕಿ ರಸ್ತೆ ಅಗಲ ಮಾಡು ಎಂದು ಹೇಳಿದ್ದು, ಹಾಗಾಗಿ ಅಗಲ ಮಾಡುತ್ತಿದ್ದೇನೆ ಎಂದು ಸಮಜಾಯಿಷಿ ನೀಡಿದ್ದಾರೆ. ನಂತರ ನಗರಸಭೆ ಆಯುಕ್ತೆ ಅಮೃತ ಅವರು ಕೂಡ ಸ್ಥಳಕ್ಕೆ ಆಗಮಿಸಿ ಕೆರೆಯಂಚಿನಲ್ಲಿ ಮಣ್ಣು ಸುರಿಯುತ್ತಿರುವುದು ಏಕೆ, ಯಾರು ಹೇಳಿದ್ದು ಎಂದು ಪ್ರಶ್ನಿಸಿದ್ದಾರೆ.

ಆಗ ಗುತ್ತಿಗೆದಾರ ಕೆ.ಬಿ.ಮಂಜುನಾಥ್ ಇಲ್ಲಿ ಯಾರೋ ಕಟ್ಟಡಗಳ ಅವಶೇಷವನ್ನು ತಂದುಗುಡ್ಡೆ ಹಾಕಿದ್ದರು. ಶಾಸಕರು ಹೇಳಿದ್ದಕ್ಕೆ ಹಸನು ಮಾಡುತ್ತಿದ್ದೇನೆ ಎಂದು ಪೌರಾಯುಕ್ತರನ್ನು ದಿಕ್ಕು ತಪ್ಪಿಸಿದ್ದಾರೆ. ಪೌರಾಯುಕ್ತರು ಕೂಡ ಇಲ್ಲಿ ಹಾಕಬೇಡಿ ಎಂದಷ್ಟೆ ಹೇಳಿ ಏನೂ ಕ್ರಮ ತೆಗೆದುಕೊಳ್ಳದೆ ಅಲ್ಲಿಂದ ಹೊರಟು ಹೋದರು.

ಸ್ಥಳಕ್ಕೆ ಮಾಧ್ಯಮದವರು ಬಂದು ಕೆರೆಗೆ ಮಣ್ಣನ್ನು ಸುರಿಯುತ್ತಿರುವುದನ್ನು ವಿಡಿಯೋ ಚಿತ್ರೀಕರಣ ಮಾಡಲು ಮುಂದಾದಾಗ ಕೆರೆ ಅಂಚಿನಲ್ಲಿ ಗುಡ್ಡೆಹಾಕಿದ್ದ ಕಸ ಕಡ್ಡಿ ಮಣ್ಣಿನ ರಾಶಿಯನ್ನು ಮತ್ತೆ ಟ್ರ್ಯಾಕ್ಟರ್‌ ಗಳಿಗೆ ತುಂಬಿಸಿ ವಾಪಸ್ ಕಳುಹಿಸಿದರು.

ಮಾಧ್ಯಮದವರು, ಅಧಿಕಾರಿಗಳು ಅಲ್ಲಿಂದ ಹೊರಟ ಮೇಲೆ ಇದೀಗ ಮಣ್ಣನ್ನು ಕೆರೆ ಅಂಚಿನ ಬದಲಿಗೆ ಕೆರೆಯ ಒಳಗೆ ಹಾಕಲಾಗುತ್ತಿದೆ. ಸರ್ಕಾರವು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಕೆರೆಯ ಹೂಳೆತ್ತುವುದು ಒಂದು ಕಡೆಯಾದರೆ ಅದೇ ಸರ್ಕಾರದ ಭಾಗವಾದ ನಗರಸಭೆಯಿಂದ ಕೈಗೊಂಡ ರಾಜಕಾಲುವೆ ತಡೆಗೋಡೆ ನಿರ್ಮಾಣದ ವೇಳೆ ತ್ಯಾಜ್ಯ ಮಣ್ಣನ್ನು ಕೆರೆಗೆ ತುಂಬಿಸಲಾಗುತ್ತಿದೆ.

ಇದು ಪರಿಸರವಾದಿ ಮತ್ತು ರೈತರ ಕೆಂಗಣ್ಣಿಗೆ ಗುರಿಯಾಗಿದೆ. ಸಂಬಂಧಿಸಿದ ಅಧಿಕಾರಿಗಳು ಕೆರೆಯ ಒಡಲಿಗೆ ರಾಜಕಾಲುವೆಯ ತ್ಯಾಜ್ಯ ಮಣ್ಣನ್ನು ತುಂಬಿಸುವುದರ ವಿರುದ್ದ ಕ್ರಮ ತೆಗೆದುಕೊಳ್ಳಬೇಕಿದೆ.

ಶಾಸಕರ ಹೆಸರನ್ನು ದುರ್ಬಳಕೆ ಮಾಡಿಕೊಂಡ ಗುತ್ತಿಗೆದಾರ

ಶಾಸಕ ಬಿ.ಎನ್.ರವಿಕುಮಾರ್ ಅವರು ಶಾಸಕರಾಗಿ ಅಧಿಕಾರವಹಿಸಿಕೊಳ್ಳುತ್ತಿದ್ದಂತೆ ಸ್ವಂತ ಹಣ ಖರ್ಚು ಮಾಡಿ ನಗರದ ಹೊರವಲಯದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ-234ರ ಅಕ್ಕ ಪಕ್ಕದಲ್ಲಿ ರಾಶಿ ರಾಶಿ ಗುಡ್ಡೆಬಿದ್ದಿದ್ದ ಕಟ್ಟಡಗಳ ಅವಶೇಷ ತ್ಯಾಜ್ಯವನ್ನು ವಿಲೇವಾರಿ ಮಾಡಿ ನಾಗರಿಕರ ಪ್ರಶಂಸೆಗೆ ಪಾತ್ರರಾಗಿದ್ದರು. ಆದರೀಗ ಮತ್ತೆ ಹೆದ್ದಾರಿ ಅಂಚಿನ ಗೌಡನಕೆರೆಗೆ ಹೂಳು ತ್ಯಾಜ್ಯದ ಮಣ್ಣನ್ನು ತುಂಬಿಸಲಾಗುತ್ತಿದೆ. ಲಕ್ಷ ಲಕ್ಷ ಸ್ವಂತ ಹಣ ಖರ್ಚು ಮಾಡಿ ರಸ್ತೆಯಂಚಿನಲ್ಲಿ ಮಣ್ಣನ್ನು ತೆಗೆಸಿದ ಶಾಸಕರ ಹೆಸರನ್ನು ಗುತ್ತಿಗೆದಾರರು ದುರ್ಬಳಕೆ ಮಾಡಿಕೊಂಡರೆ ಎನ್ನುವ ಪ್ರಶ್ನೆ ಸಾರ್ವಜನಿಕರನ್ನು ಕಾಡತೊಡಗಿದೆ.

For Daily Updates WhatsApp ‘HI’ to 7406303366

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!