Sidlaghatta : ಶಿಡ್ಲಘಟ್ಟ ತಾಲ್ಲೂಕಿನ ತಲಕಾಯಲಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಿಯಪ್ಪನಹಳ್ಳಿ ಗ್ರಾಮದ ಜಲ ಜೀವನ್ ಮಿಷನ್ ಯೋಜನೆಯಡಿ ಮಂಜೂರಾದ ಕಾಮಗಾರಿ ಸ್ಥಳ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಕೇಂದ್ರ ಹಾಗೂ ಗ್ರಾಮದ ಮನೆ ಮನೆಗೆ ಸರಬರಾಜು ಆಗುವ ಬೃಹತ್ ನೀರು ಸರಬರಾಜು ಟ್ಯಾಂಕ್ ಸ್ಥಳಕ್ಕೆ ಜಿಲ್ಲಾ ಪಂಚಾಯಿತಿ ಸಿಇಒ ಡಾ.ನವೀನ್ ಭಟ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ.ತಿಮ್ಮಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳೇಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕೇಂದ್ರಕ್ಕೆ ಭೇಟಿ ನೀಡಿ, ಎನ್ ಜಿ ಓ ಕಡೆಯಿಂದ ಮಂಜೂರಾದ ಸೈಕಲ್ ಗಳನ್ನು ಅವರು ವಿತರಣೆ ಮಾಡಿದರು. ನಂತರ ಗ್ರಾಮದಲ್ಲಿರುವ ಮನೆ ಮನೆಗೆ ಗಂಗೆ ಅಳವಡಿಸಿರುವ (ನಲ್ಲಿ) ನಳಗಳನ್ನು ಮಾನ್ಯರು ನೀರು ಬರುವುದರ ಬಗ್ಗೆ ಪರೀಕ್ಷಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಸಿಇಒ ಡಾ.ನವೀನ್ ಭಟ್, ಜಲಜೀವನ್ ಮಿಷನ್ (ಜೆಜೆಎಂ) ಕಾಮಗಾರಿಯಲ್ಲಿ ಯಾವುದೇ ಲೋಪವಾಗದಂತೆ ಎಚ್ಚರ ವಹಿಸಬೇಕು. ಗುಣಮಟ್ಟದ ಕಾಮಗಾರಿ ಆದ್ಯತೆಯಾಗಿರಲಿ. ಕಾಮಗಾರಿಯಲ್ಲಿ ಗುಣಮಟ್ಟ ಪ್ರಮುಖವಾಗಿದ್ದು, ಯಾವುದೇ ಕಾರಣಕ್ಕೂ ಕಳಪೆ ಕಾಮಗಾರಿ ನಡೆಯಬಾರದು. ಪರಿಶೀಲನೆ ವೇಳೆ ಲೋಪ ಕಂಡುಬಂದರೆ ಗುತ್ತಿಗೆದಾರರ ಜೊತೆ, ಸಂಬಂಧಪಟ್ಟ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಸಿದರು.
ತಾಲ್ಲೂಕು ಪಂಚಾಯಿತಿ ಇಒ ಹೇಮಾವತಿ, ಎಇಇ ಲೋಕೇಶ, ತಲಕಾಯಲಬೆಟ್ಟ ಪಂಚಾಯಿತಿ ಪಿಡಿಒ ಶ್ರೀನಿವಾಸ, ಈ.ತಿಮ್ಮಸಂದ್ರ ಪಂಚಾಯಿತಿ ಪಿಡಿಒ ತನ್ವೀರ್ ಅಹ್ಮದ್, ಜಿಲ್ಲಾ ಪಂಚಾಯತ್ ಜೆಜೆಎಂ ಸಂಯೋಜಕ ಜಗದೀಶ್, ನರೇಗಾ ಸಂಯೋಜಕ ಲೋಕೇಶ, ತಲಕಾಯಲಬೆಟ್ಟ ಮತ್ತು ಈ.ತಿಮ್ಮಸಂದ್ರ ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಜರಿದ್ದರು.