Jangamakote, sidlaghatta : ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆಯಲ್ಲಿ ಪ್ರಸನ್ನ ಗಂಗಾಧರೇಶ್ವರಸ್ವಾಮಿ ಗೆಳೆಯರ ಬಳಗದ ವತಿಯಿಂದ 20 ಅಡಿ ಎತ್ತರದ ಗಣಪತಿ ಮೂರ್ತಿಯ ಉತ್ಸವ ಹಾಗೂ ಆನೆಯ ಮೇಲೆ ಪಾರ್ವತಾಂಬ ಸಮೇತ ಗಂಗಾಧರೇಶ್ವರಸ್ವಾಮಿಯ ಮೆರವಣಿಗೆ ಭವ್ಯವಾಗಿ ಜರುಗಿತು.
ದೇವಾಲಯದಿಂದ ಹೊರಟ ಮೆರವಣಿಗೆಯಲ್ಲಿ ಆನೆಯ ಮೇಲಿನ ಸ್ವಾಮಿಯ ಪ್ರತಿಷ್ಠಾಪನೆ, ಗ್ರಾಮದೇವರ ಪಲ್ಲಕ್ಕಿಗಳು, ತಮಟೆ-ಡೋಳಗಳ ಸದ್ದು, ಕೀಲುಕುದುರೆಗಳ ಮೆರಗು, ಸಾಂಸ್ಕೃತಿಕ ಕಲಾತಂಡಗಳ ಪ್ರದರ್ಶನಗಳು ಹಾಗೂ ಯುವಕರ ನೃತ್ಯ-ಸಂಭ್ರಮ ಗ್ರಾಮದೆಲ್ಲೆಡೆ ಆಕರ್ಷಣೆಯ ಕೇಂದ್ರವಾಗಿತ್ತು. ಹೂವಿನ ಮಳೆ, ಪಟಾಕಿ ಸಿಡಿತದ ನಡುವೆ ಜಂಗಮಕೋಟೆ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಭಕ್ತರು ಪಾಲ್ಗೊಂಡು ಉತ್ಸವಕ್ಕೆ ವಿಶಿಷ್ಟತೆ ನೀಡಿದರು.
ಹಿಂದೂ-ಮುಸ್ಲಿಂ ಸಮುದಾಯದ ಮುಖಂಡರು ಸಾಮರಸ್ಯದ ಸಂಕೇತವಾಗಿ ಮೆರವಣಿಗೆಯಲ್ಲಿ ಭಾಗವಹಿಸಿದರು. ಜಂಗಮಕೋಟೆಯ ಗಂಗಾಧರೇಶ್ವರಸ್ವಾಮಿ ದೇವಾಲಯದಿಂದ ಜಂಗಮಕೋಟೆ ಕ್ರಾಸ್‌ವರೆಗೆ ಮೆರವಣಿಗೆ ಸಾಗಿತು.
ಬಿಜೆಪಿ ಜಿಲ್ಲಾಧ್ಯಕ್ಷ ರಾಮಚಂದ್ರೇಗೌಡ, ಕಾಂಗ್ರೆಸ್ ಮುಖಂಡ ಪುಟ್ಟು ಆಂಜಿನಪ್ಪ, ಮಾಜಿ ಸಚಿವ ಎಚ್.ಎಂ. ಮುನಿಯಪ್ಪ ಸೇರಿದಂತೆ ಹಲವು ರಾಜಕೀಯ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಮಾತನಾಡಿದ ರಾಮಚಂದ್ರೇಗೌಡ, ಯುವಕರು ಒಗ್ಗಟ್ಟಿನಿಂದ ಗಣೇಶೋತ್ಸವವನ್ನು ಯಶಸ್ವಿಯಾಗಿ ನೆರವೇರಿಸಿರುವುದು ಸಂತಸದ ವಿಚಾರವಾಗಿದ್ದು, ಇಂತಹ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಸಮಾಜದಲ್ಲಿ ಶ್ರೇಷ್ಠ ವ್ಯಕ್ತಿಗಳಾಗಿ ಬೆಳೆವಂತೆ ಕರೆ ನೀಡಿದರು.
ಮೆರವಣಿಗೆಯ ಹಿನ್ನೆಲೆಯಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ಎಂ.ಶ್ರೀನಿವಾಸ್ ಅವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಬಿಜೆಪಿ ತಾಲ್ಲೂಕು ಅಧ್ಯಕ್ಷ ಆನಂದಗೌಡ, ಗ್ರಾಮ ಪಂಚಾಯಿತಿ ಸದಸ್ಯ ಚಂದ್ರಮೋಹನ್, ಫಯಾಜ್, ಜೆ.ಎಂ.ಮೂರ್ತಿ, ಎಲ್.ಮುನಿರಾಜು, ಜೆ.ಎಸ್.ಮಂಜುನಾಥ್, ಮೆಡಿಕಲ್ ಮಂಜುನಾಥ್, ಮುನ್ನಾಸೀರ್, ಅಂಬರೀಶ್ ಹಾಗೂ ಅರ್ಚಕ ಸುರೇಂದ್ರಬಾಬು ಹಾಜರಿದ್ದರು.