Jangamakote, Sidlaghatta : ಸಹಕಾರ ಅಥವಾ ವಾಣಿಜ್ಯ ಬ್ಯಾಂಕುಗಳಲ್ಲಿ ಪಡೆದ ಸಾಲವನ್ನು ಇಂದಲ್ಲ ನಾಳೆ ಸರ್ಕಾರವು ಮನ್ನಾ ಮಾಡುತ್ತದೆ ಎಂದು ಪಡೆದುಕೊಂಡ ಸಾಲವನ್ನು ಸಕಾಲಕ್ಕೆ ವಾಪಸ್ ಕಟ್ಟದಿರುವ ಕೆಟ್ಟ ಚಾಳಿ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ ಎಂದು ಕೋಚಿಮುಲ್ ಮಾಜಿ ನಿರ್ದೇಶಕ ಬಂಕ್ ಮುನಿಯಪ್ಪ ಬೇಸರ ವ್ಯಕ್ತಪಡಿಸಿದರು.
ತಾಲ್ಲೂಕಿನ ಜಂಗಮಕೋಟೆಯ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘ(SFCS Bank) ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು.
ಯಾವುದೆ ಸಹಕಾರಿ ಬ್ಯಾಂಕ್ ಅಥವಾ ವಾಣಿಜ್ಯ ಬ್ಯಾಂಕ್ ಗೆ ಸರ್ಕಾರ ಹಣ ಕೊಡುವುದಿಲ್ಲ. ಬ್ಯಾಂಕುಗಳಲ್ಲಿ ಸಾರ್ವಜನಿಕರು ಇಡುವ ಠೇವಣಿ ಹಣವನ್ನೆ ಸಾಲವಾಗಿ ವಿತರಿಸಲಾಗುತ್ತದೆ. ನಾವು ಪಡೆದ ಸಾಲವನ್ನು ಸಕಾಲಕ್ಕೆ ಮರು ಪಾವತಿಸಿದರೆ ಅದನ್ನೆ ಬೇರೆಯವರಿಗೆ ಸಾಲವಾಗಿ ಕೊಡುತ್ತಾರೆ ಅಷ್ಟೆ.
ಆದ್ದರಿಂದ ಸರ್ಕಾರವು ಸಾಲ ಮನ್ನಾ ಮಾಡುತ್ತದೆ ಎನ್ನುವ ಭಾವನೆ ಬಿಟ್ಟು ಪಡೆದ ಸಾಲವನ್ನು ಸಕಾಲಕ್ಕೆ ಮರುಪಾವತಿ ಮಾಡಿ. ಇದರಿಂದ ಸಂಕಷ್ಟದಲ್ಲಿ ಇರುವ ಇತರರಿಗೆ ಸಕಾಲಕ್ಕೆ ಸಾಲ ಸಿಗಲಿದೆ ಎಂದರು.
ಮುಖಂಡ ತಾದೂರು ರಘು ಮಾತನಾಡಿ, ಚುಣಾವಣೆಗಳು ಬಂದಾಗ ಮಾತ್ರ ಆ ಪಕ್ಷ ಈ ಪಕ್ಷ ಎಂಬುದಿರಲಿ, ಚುನಾವಣೆ ಮುಗಿದ ಮೇಲೆ ಎಲ್ಲರೂ ಒಂದೆ. ಬ್ಯಾಂಕ್ ನ ಅಧ್ಯಕ್ಷರು ಹಾಗೂ ನಿರ್ದೇಶಕರು ಎಲ್ಲರೂ ಪಕ್ಷವನ್ನು ಮೀರಿ ಸಹಕಾರ ಸಂಘದ ಆರ್ಥಿಕ ಅಭಿವೃದ್ದಿಗೆ ಶ್ರಮಿಸಬೇಕು.
ಸಾಲ ಕೇಳಿ ಬರುವ ರೈತರನ್ನು ಪಕ್ಷಬೇಧ ಮಾಡದೆ ಸಂಕಷ್ಟದಲ್ಲಿ ಇರುವ ಅಗತ್ಯ ಇರುವ ಎಲ್ಲರಿಗೂ ಸಾಲ ನೀಡಿ ಎಂದು ಮನವಿ ಮಾಡಿದರು.
ಸಹಕಾರ ಸಂಘಗಳಲ್ಲಿ ರಾಜಕೀಯ ನುಸುಳದಂತೆ ನಾವೆಲ್ಲರೂ ಎಚ್ಚರವಹಿಸಬೇಕು, ಗ್ರಾಮೀಣ ಭಾಗದಲ್ಲಿ ಇಂದಿಗೂ ಸಹಕಾರ ವ್ಯವಸ್ಥೆ ಜೀವಂತವಾಗಿದ್ದು ಹಿರಿಯರು ಶ್ರಮಪಟ್ಟು ಕಟ್ಟಿದ ಸಹಕಾರಿ ವ್ಯವಸ್ಥೆಯನ್ನು ನಾವು ಉಳಿಸಿಕೊಂಡು ಬೆಳೆಸಿಕೊಂಡು ಹೋಗಬೇಕಿದೆ ಎಂದರು.
ಬ್ಯಾಂಕ್ ವ್ಯಾಪ್ತಿಯ ಹಲವು ರೈತರಿಗೆ ಸಾಲದ ಚೆಕ್ ಗಳನ್ನು ವಿತರಿಸಲಾಯಿತು. ಸಹಕಾರ ಸಂಘದ ಆಡಳಿತ ಮಂಡಳಿಯಿಂದ ಬಂಕ್ ಮುನಿಯಪ್ಪ, ತಾದೂರು ರಘು, ಡಿಸಿಸಿ ಬ್ಯಾಂಕ್ ನ ವ್ಯವಸ್ಥಾಪಕ ಆನಂದ್ ಅವರನ್ನು ಸನ್ಮಾನಿಸಲಾಯಿತು.
ಜಂಗಮಕೋಟೆ ಎಸ್.ಎಫ್.ಸಿ.ಎಸ್ ಬ್ಯಾಂಕ್ ನ ಅಧ್ಯಕ್ಷ ಜೆ.ಎಂ.ವೆಂಕಟೇಶ್, ಉಪಾಧ್ಯಕ್ಷ ಎ.ಗೋಪಾಲ್, ನಿರ್ದೇಶಕರಾದ ಟಿ.ಆಂಜಿನಪ್ಪ, ಎಂ.ನಾಗರಾಜ್, ಕೆ.ಎನ್.ಮುನಿರಾಜು, ವಿ.ಮಂಜುನಾಥ್, ಜೆ.ಕೆ.ಮಧುಕುಮಾರ್, ಜಿ.ಪಿ.ಆಂಜಿನಪ್ಪ, ಎನ್.ರಾಮಕೃಷ್ಣಪ್ಪ, ಬಿ.ಎಂ.ಚೌಡಪ್ಪ, ರೂಪಗಂಗರೆಡ್ಡಿ, ಮಂಜುಳಗುಂಡಪ್ಪ, ಪ್ರಭಾರ ಸಿಇಒ ಆನಂದ್, ಡಿಸಿಸಿ ಬ್ಯಾಂಕ್‌ನ ಮೇಲ್ವಿಚಾರಕ ಸಂತೋಷ್, ವ್ಯವಸ್ಥಾಪಕ ಆನಂದ್ ಹಾಜರಿದ್ದರು.