Sidlaghatta, Chikkaballapur : ಶಿಡ್ಲಘಟ್ಟ ತಾಲ್ಲೂಕಿನ ಹಂಡಿಗನಾಳದ ಶ್ರೀವೀರಣ್ಣಸ್ವಾಮಿ–ಶ್ರೀಕೆಂಪಣ್ಣಸ್ವಾಮಿ ದೇವಾಲಯದಲ್ಲಿ ಕೆವಿ ಟ್ರಸ್ಟ್ ವತಿಯಿಂದ ಆಯೋಜಿಸಲಾದ ಅಮಾವಾಸ್ಯೆ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜಸ್ಟಿಸ್ ಗೋಪಾಲಗೌಡರು, ದೇಶದ ಕೃಷಿ ಪರಿಸ್ಥಿತಿ ಮತ್ತು ಸರ್ಕಾರಗಳ ನಿರ್ಲಕ್ಷ್ಯ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ದೇಶದ 60% ಜನರು ಕೃಷಿಯಲ್ಲಿ ನಿರ್ವಹಿಸುತ್ತಿದ್ದಾರೆ, ಸರ್ಕಾರಗಳು ರೈತರಿಗೆ ಕೊಡಬೇಕಾದ ಮಾನ್ಯತೆ, ಆದ್ಯತೆ ಮತ್ತು ರಕ್ಷಣೆಯನ್ನು ನೀಡುವುದಿಲ್ಲ. “ರೈತರು ದೇಶದ ಬೆನ್ನೆಲುಬು ಎನ್ನುವುದು ಕೇವಲ ಮಾತು—ಕಾರ್ಯದಲ್ಲಿ ಕಾಣುವುದಿಲ್ಲ” ಎಂದು ಅವರು ವಿಷಾದ ವ್ಯಕ್ತಪಡಿಸಿದರು.
“ಯುವಕರು ಪ್ರಶ್ನಿಸುವ ಧೈರ್ಯ ಬೆಳೆಸಿಕೊಳ್ಳಬೇಕು”
ನ್ಯಾಯಮೂರ್ತಿಗಳು ಸಮಾಜಕ್ಕೆ ಯುವಕರ ಪಾತ್ರವನ್ನು ಎತ್ತಿ ಹೇಳಿದರು. ಅನ್ಯಾಯ ಎದುರಿಸಿದಾಗ ಪ್ರಶ್ನಿಸುವ ಮನೋಭಾವ ಬೆಳೆಸಬೇಕು ಎಂದು ಸಲಹೆ ನೀಡಿದರು. “ಮಕ್ಕಳನ್ನು ಕಷ್ಟ–ಕಾರ್ಪಣ್ಯಗಳಿಂದ ದೂರ ಇಡುವುದರಿಂದ ಸಮಾಜ ಅರಿವಿಲ್ಲದ ಪೀಳಿಗೆ ಬೆಳೆದು ಬರುತ್ತಿದೆ” ಎಂದರು.
ಮಹಿಳೆಯರು, ರೈತರಿಗೆ ನ್ಯಾಯ ಕೇವಲ ಮಾತಲ್ಲಿ
ಸಮಾಜದಲ್ಲಿ ರೈತರು ಹಾಗೂ ಮಹಿಳೆಯರ ಸಮಸ್ಯೆಗಳು ಮಾತನಾಡುವ ಮಟ್ಟಕ್ಕಷ್ಟೇ ಸೀಮಿತವಾಗಿವೆ, ನಿಜವಾದ ಕಾಳಜಿ ಹಾಗೂ ವ್ಯವಸ್ಥೆಗಳು ಇನ್ನೂ ಬಲವಾಗಿಲ್ಲ ಎಂದು ಅವರು ಗಂಭೀರವಾಗಿ ಪ್ರಶ್ನಿಸಿದರು.
“ಶುದ್ಧ ಕುಡಿಯುವ ನೀರು ಕೂಡ ಸರ್ಕಾರ ನೀಡಿಲ್ಲ…”
ಸ್ವಾತಂತ್ರ್ಯಕ್ಕೆ 75 ವರ್ಷ ಕಳೆದರೂ ನಾಗರಿಕರಿಗೆ ಉಚಿತ ಶುದ್ಧ ಕುಡಿಯುವ ನೀರನ್ನು ನೀಡಲು ಸರ್ಕಾರಗಳು ವಿಫಲವಾಗಿವೆ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಬೆಂಗಳೂರಿನ ಕುಡಿಯುವ ನೀರು ಹಾಗೂ ಕೋಲಾರ–ಚಿಕ್ಕಬಳ್ಳಾಪುರ ಕೃಷಿ ನೀರಾವರಿಗಾಗಿ ಕೃಷ್ಣಾ ನದಿ ನೀರನ್ನು ಹರಿಸುವ ಮನವಿಗೆ ಆಂಧ್ರ ಸರ್ಕಾರ ತಾತ್ವಿಕವಾಗಿ ಒಪ್ಪಿದೆ ಎಂದು ಗೋಪಾಲಗೌಡರು ತಿಳಿಸಿದರು.
ಈ ಬಗ್ಗೆ ಆಂಧ್ರದ ಡೆಪ್ಯೂಟಿ ಸಿಎಂ ಪವನ್ ಕಲ್ಯಾಣ್ ಹಾಗೂ ಕೇಂದ್ರ ಸಚಿವ ಸೋಮಣ್ಣ ಮುಖಾಂತರ ಚರ್ಚೆ ನಡೆದಿದ್ದು, ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಒಪ್ಪಿಗೆ ಸೂಚಿಸಿದ್ದಾರೆ ಎಂದು ಅವರು ವಿವರಿಸಿದರು.
“ಶಿಕ್ಷಣ ಮಾತ್ರ ಸಾಲದು… ಸಂಸ್ಕಾರ ಬೇಕು”
ಮಕ್ಕಳಿಗೆ ಉನ್ನತ ಶಿಕ್ಷಣದ ಜೊತೆಗೆ ದೇಶಾಭಿಮಾನ, ಸಂಸ್ಕಾರ, ಸಮಾಜ ಸೇವೆ ಎಂಬ ಮೌಲ್ಯಗಳನ್ನು ಕಲಿಸುವುದು ಪೋಷಕರ ಜವಾಬ್ದಾರಿ ಎಂದು ಹೇಳಿದರು.
ಅಮಾವಾಸ್ಯೆ ಪೂಜೆಯ ನಂತರ ಟ್ರಸ್ಟ್ ವತಿಯಿಂದ ವಿಶೇಷ ದೀಪಾರತಿ ನಡೆಯಿತು. ಹಿರಿಯರಿಗೆ ಹಾಗೂ ಮಾದರಿ ಕೃಷಿ ನಡೆಸುತ್ತಿರುವ ಹಾರೋಹಳ್ಳಿಯ ಸುಷ್ಮಾ–ಚನ್ನಕೇಶವ ದಂಪತಿಗಳಿಗೆ ಸನ್ಮಾನ ಮಾಡಲಾಯಿತು.
For Daily Updates WhatsApp ‘HI’ to 7406303366









