Kakachokkandahalli, Sidlaghatta : ಜಮೀನು ವಿಚಾರವಾಗಿ ಮಹಿಳೆಯೊಬ್ಬರ ಮೇಲೆ ದೊಣ್ಣೆಯಿಂದ ಹಲ್ಲೆ ಮಾಡಿರುವ ಘಟನೆ ತಾಲ್ಲೂಕಿನ ಚೊಕ್ಕಂಡಹಳ್ಳಿ ಗ್ರಾಮದಲ್ಲಿ ಭಾನುವಾರ ನಡೆದಿದೆ.
ತಾಲ್ಲೂಕಿನ ಚೊಕ್ಕಂಡಹಳ್ಳಿ ಗ್ರಾಮದ ಪರಿಶಿಷ್ಟ ಪಂಗಡ ನಾಯಕ ಸಮುದಾಯಕ್ಕೆ ಸೇರಿದ ಲಕ್ಷ್ಮಮ್ಮ ಕೋಂ ಆಂಜಿನಪ್ಪ ಹಲ್ಲೆಗೊಳಗಾಗಿರುವ ಮಹಿಳೆಯಾಗಿದ್ದು ಹಲ್ಲೆಯಲ್ಲಿ ಲಕ್ಷ್ಮಮ್ಮನ ಹಲ್ಲು ಮುರಿದಿದ್ದು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗ್ರಾಮದ ಸರ್ವೇ ನಂ 92 ರಲ್ಲಿನ 30 ಗುಂಟೆ ಜಮೀನಿಗೆ ಸಂಬಂಧಿಸಿದಂತೆ ಗ್ರಾಮದ ಸವರ್ಣೀಯರು ಹಾಗೂ ಎಸ್.ಟಿ ಜನಾಂಗದ ಲಕ್ಷ್ಮಮ್ಮ ಎಂಬುವವರ ಕುಟುಂಬಗಳಿಗೆ ಹಿಂದಿನಿಂದಲೂ ತಗಾದೆ ಇದೆ. ಅದನ್ನೆ ನೆಪ ಮಾಡಿಕೊಂಡು ಭಾನುವಾರ ಸಂಜೆ ಗ್ರಾಮದ ಸರ್ಕಾರಿ ಶಾಲೆ ಪಕ್ಕದ ರಸ್ತೆಯಲ್ಲಿ ಬರುತ್ತಿದ್ದ ಲಕ್ಷ್ಮಮ್ಮನ ಮೇಲೆ ಅದೇ ಗ್ರಾಮದ ಸಿ.ಬಿ.ದೇವರಾಜ್, ನಾಗೇಶ್ ಬಾಬು, ಸಿ.ಬಿ.ವೆಂಕಟೇಶ್, ಲಕ್ಷ್ಮೀಪತಿ, ನಾರಾಯಣಸ್ವಾಮಿ, ನವೀನ್, ಅಶೋಕ್ ಹಾಗೂ ಕಾರ್ತಿಕ್ ದೊಣ್ಣೆಯಿಂದ ಹಲ್ಲೆ ಮಾಡುವ ಜೊತೆಗೆ ಜಾತಿ ನಿಂದನೆ ಮಾಡಿದ್ದಾರೆ ಎನ್ನಲಾಗಿದೆ.
ಹಳೇ ವೈಷಮ್ಯವೇ ಹಲ್ಲೆಗೆ ಕಾರಣ :
ಕಳೆದ ಮೂವತ್ತು ವರ್ಷಗಳ ಹಿಂದೆ ಗ್ರಾಮದ ಪರಿಶಿಷ್ಟ ಪಂಗಡಕ್ಕೆ ಸೇರಿದವರ ಹುಲ್ಲಿನ ಮನೆಗಳ ಮೇಲೆ ಬೆಂಕಿ ಹಾಕಿದ್ದ ಪ್ರಕರಣದಲ್ಲಿ ಸಿ.ಬಿ.ದೇವರಾಜ್ ಮತ್ತಿತರರ ಮೇಲೆ 307 ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಅದೇ ಹಳೇ ದ್ವೇಷದ ಹಿನ್ನಲೆಯಲ್ಲಿ ಜಮೀನು ವಿವಾದದ ಖ್ಯಾತೆ ತೆಗೆದು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಸ್ಥಳೀಯ ಗ್ರಾಮಾಂತರ ಠಾಣೆ ಪೊಲೀಸರು ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಜಮೀನು ವಿವಾದದ ಹಿನ್ನಲೆಯಲ್ಲಿ ಮಹಿಳೆ ಎಂಬುವುದನ್ನು ಸಹ ನೋಡದೇ ನಡು ರಸ್ತೆಯಲ್ಲಿ ಎಳೆದಾಡಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಸಾಲದ್ದಕ್ಕೆ ನೀವು ಬೇಡರು ಎಂದು ಜಾತಿನಿಂದನೆ ಮಾಡಿದ್ದು ಈ ಹಿಂದೆ ನಿಮ್ಮ ಹುಲ್ಲು ಮನೆಗಳಿಗೆ ಬೆಂಕಿ ಹಾಕಿದ್ದು ಮರೆತು ಹೋಗಿದ್ದೀರಾ, ನಿಮ್ಮನ್ನು ಊರಲ್ಲಿ ಇರಲು ಬಿಡುವುದಿಲ್ಲ ಎನ್ನುತ್ತಾ ಮನಸೋ ಇಚ್ಚೆ ಹಲ್ಲೆ ಮಾಡಿದ್ದಾರೆ. ಈ ಬಗ್ಗೆ ಶಿಡ್ಲಘಟ್ಟ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದು ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಜರುಗಿಸುವ ಜೊತೆಗೆ ಪೊಲಿಸರು ನಮಗೆ ಸೂಕ್ತ ರಕ್ಷಣೆ ನೀಡಬೇಕು
ಲಕ್ಷ್ಮಮ್ಮ, ಹಲ್ಲೆಗೊಳಗಾದ ಮಹಿಳೆ
For Daily Updates WhatsApp ‘HI’ to 7406303366









