Kalanayakanahalli, Sidlaghatta : ನಮ್ಮೂರಿನ ಸರ್ಕಾರಿ ಶಾಲೆಯಲ್ಲಿ 240ಕ್ಕೂ ಹೆಚ್ಚು ಮಕ್ಕಳಿದ್ದು, ಇಡೀ ತಾಲ್ಲೂಕಿನಲ್ಲಿ ಅತಿ ಹೆಚ್ಚು ಮಕ್ಕಳಿರುವ ಎರಡನೇ ಸರ್ಕಾರಿ ಶಾಲೆ ನಮ್ಮದಾಗಿದೆ. ಇಲ್ಲಿ ಪ್ರೌಢಶಾಲೆ (High School) ಆರಂಭಿಸುವಂತೆ ಸರ್ಕಾರಕ್ಕೆ ಪ್ರಸ್ತಾವವನ್ನು ಕಳುಹಿಸಲಾಗಿದೆ ಎಂದು ಪಿ.ಎಲ್.ಡಿ ಬ್ಯಾಂಕ್ ನಿರ್ದೇಶಕ ಕಾಳನಾಯಕನಹಳ್ಳಿ ಭೀಮೇಶ್ ಅವರು ತಿಳಿಸಿದರು.
ತಾಲ್ಲೂಕಿನ ಕುಂಭಿಗಾನಹಳ್ಳಿ (ಎಚ್. ಕ್ರಾಸ್) ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಳನಾಯಕನಹಳ್ಳಿಯಲ್ಲಿ ನೂತನವಾಗಿ ನಿರ್ಮಿಸಿರುವ ಮಾದರಿ ಅಂಗನವಾಡಿ ಕೇಂದ್ರ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರೌಢಶಾಲೆ ಪ್ರಸ್ತಾವ:
ಕಾಳನಾಯಕನಹಳ್ಳಿ ಹಾಗೂ ಸುತ್ತಮುತ್ತಲ ಸರ್ಕಾರಿ ಶಾಲೆಗಳ ನಡುವಿನ ಅಂತರ, ಶಾಲಾ ಮಕ್ಕಳ ಸಂಖ್ಯೆ ಸೇರಿದಂತೆ ಅಗತ್ಯ ಮಾಹಿತಿಯನ್ನು ಸಂಬಂಧಿಸಿದ ಅಧಿಕಾರಿಗಳಿಗೆ ನೀಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರ ಬಳಿಯೂ ಈ ಕುರಿತು ಚರ್ಚಿಸಲಾಗಿದ್ದು, ಅವರು ಈ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಭೀಮೇಶ್ ಹೇಳಿದರು.
ಶಾಲೆಯ ಬಗ್ಗೆ ಕಾಳಜಿಯುಳ್ಳ ಶಿಕ್ಷಕರು, ಪೋಷಕರು, ಎಸ್‌ಡಿಎಂಸಿ ಸಮಿತಿ ಮತ್ತು ಅಧಿಕಾರಿಗಳಿಂದ ಶಾಲೆಯು ಉತ್ತಮವಾಗಿ ನಡೆಯುತ್ತಿದೆ. ಶಾಲೆಯ ಪ್ರಗತಿಯಲ್ಲಿ ರಾಜಕೀಯ ಬೆರೆಸದೆ ನಾವೆಲ್ಲರೂ ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು. ಪ್ರಾಥಮಿಕ ಪೂರ್ವ ಹಂತದಲ್ಲೇ ಕಲಿಕೆಗೆ ಭದ್ರ ಬುನಾದಿ ಹಾಕುವ ಕೆಲಸ ಅಂಗನವಾಡಿ ಕೇಂದ್ರಗಳಲ್ಲಿ ಆಗಲಿದೆ. ಸದೃಢ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೂ ಅಂಗನವಾಡಿ ಕೇಂದ್ರಗಳು ಪೂರಕವಾಗಿ ಕಾರ್ಯನಿರ್ವಹಿಸಲಿವೆ ಎಂದರು.
ಅಂಗನವಾಡಿ ಅಥವಾ ಶಾಲಾ ಮಕ್ಕಳು ಕೇಳಿ ತಿಳಿಯುವುದಕ್ಕಿಂತಲೂ ನೋಡಿ ಕಲಿಯುವುದೇ ಹೆಚ್ಚು. ಹಾಗಾಗಿ ಪೋಷಕರು ಮಕ್ಕಳ ಮುಂದೆ ಉತ್ತಮ ನಡೆ-ನುಡಿಯನ್ನು ರೂಢಿಸಿಕೊಳ್ಳಬೇಕು. ಸರ್ಕಾರವು ಉತ್ತಮ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿದ್ದರೂ ಪೋಷಕರು ಖಾಸಗಿ ಶಾಲೆಗಳತ್ತ ಹೆಚ್ಚು ವ್ಯಾಮೋಹ ಬೆಳೆಸುತ್ತಿದ್ದಾರೆ. ಸರ್ಕಾರಿ ಸವಲತ್ತುಗಳನ್ನು ಬಳಸಿಕೊಳ್ಳುವಂತಾಗಬೇಕು ಎಂದು ಭೀಮೇಶ್ ಅವರು ಹೇಳಿದರು.








