Sidlaghatta : ಶಿಡ್ಲಘಟ್ಟ ನಗರದ ಗಾಂಧಿನಗರ ನಿವಾಸಿ ಶ್ರೀಧರ್ ಎಂಬುವವರ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿರುವ ಘಟನೆ ಗುರುವಾರ ರಾತ್ರಿ ನಡೆದಿದೆ. ಕರಗ ಉತ್ಸವ ಮುಗಿಸಿ ಮನೆಗೆ ಮರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ ಎಂದು ಸಂತ್ರಸ್ತ ತಿಳಿಸಿದ್ದಾರೆ.
ಸಂತ್ರಸ್ತ ಶ್ರೀಧರ್ ಕರಗ ಉತ್ಸವಕ್ಕೆ ತೆರಳಿದ್ದರು. ಅಲ್ಲಿಂದ ವಾಪಸ್ ಬರುತ್ತಿದ್ದಾಗ ಬೋವಿ ನಗರದ ವ್ಯಕ್ತಿಯೊಬ್ಬ ಇವರನ್ನು ಅಡ್ಡಗಟ್ಟಿದ್ದಾನೆ. ಯಾವುದೇ ಪ್ರಚೋದನೆ ಇಲ್ಲದೆ ಶ್ರೀಧರ್ ಅವರ ಮೇಲೆ ಹಲ್ಲೆ ನಡೆಸಿದ ಆರೋಪಿ, ದೇಹದ ವಿವಿಧ ಭಾಗಗಳಿಗೆ ಗಾಯ ಮಾಡಿದ್ದಾನೆ. ಶ್ರೀಧರ್ ಅವರ ಮೈಮೇಲೆ ಹಿಂದೆಯಿಂದ ಹೊಡೆದ ಏಟಿಗೆ ಅವರ ಕುತ್ತಿಗೆ ಭಾಗ ಹಾಗೂ ಅವರ ಕೈಗೆ ಬಲವಾಗಿ ಬಿದ್ದ ಕಾರಣ ಸುಮಾರು 32 ಕ್ಕೂ ಹೆಚ್ಚು ಹೊಲಿಗೆಗಳು ಬಿದ್ದಿವೆ.
ಘಟನೆ ನಡೆಯುತ್ತಿದ್ದಂತೆ ಸ್ಥಳದಲ್ಲಿದ್ದ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾದರು. ಪೊಲೀಸರನ್ನು ಕಂಡೊಡನೆ ಆರೋಪಿ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಗಾಯಗೊಂಡಿದ್ದ ಶ್ರೀಧರ್ ಅವರನ್ನು ಪೊಲೀಸರು ತಮ್ಮ ವಾಹನದಲ್ಲೇ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ.
ಈ ಸಂಬಂಧ ಶ್ರೀಧರ್ ಅವರು ಈಗಾಗಲೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಎಫ್.ಐ.ಆರ್ ದಾಖಲಿಸಿಕೊಂಡಿದ್ದಾರೆ.








