Sidlaghatta : ರೈತರಿಂದ ಮತ ಪಡೆದು ವಿಧಾನಸಭೆಗೆ ಹೋಗಿರುವ ಜನಪ್ರತಿನಿಧಿಗಳು, ಕೊಟ್ಟ ಮಾತನ್ನು ಉಳಿಸಿಕೊಳ್ಳದೆ ವಚನ ಭ್ರಷ್ಟರಾಗಿರುವ ಕಾರಣ, ಮುಂದಿನ ಗ್ರಾ.ಪಂ, ತಾ.ಪಂ, ಜಿ.ಪಂ ಸೇರಿದಂತೆ ವಿಧಾನಸಭೆ ಚುನಾವಣೆಗಳಲ್ಲಿ ರೈತರ ಪ್ರತಿನಿಧಿಗಳನ್ನೆ ಆಯ್ಕೆ ಮಾಡಿಕಳುಹಿಸಬೇಕು ಎಂದು ತೀರ್ಮಾನಿಸಿದ್ದೇವೆ ಎಂದು ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆಯ ರಾಜ್ಯಾಧ್ಯಕ್ಷ ಅರಳಾಪುರ ಮಂಜೇಗೌಡ ತಿಳಿಸಿದರು.
ನಗರದ ಪ್ರವಾಸಿಮಂದಿರದಲ್ಲಿ ಸೋಮವಾರ ನಡೆದ ಜಾಗೃತಿ ದೀಕ್ಷೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಅವರು ಮಾತನಾಡಿದರು.
ಇತ್ತೀಚೆಗೆ ಘೋಷಿಸಿದ ರಾಜ್ಯದ ಬಜೆಟ್ ರೈತರಿಗೆ ಮರಣಶಾಸನವಾಗಿದೆ. ಗ್ರಾಮೀಣ ಪ್ರದೇಶದ ರೈತರಿಗೆ ಕೊಟ್ಟಿರುವ ಮಾತು ಉಳಿಸಿಕೊಳ್ಳಲು ಸರ್ಕಾರದಿಂದ ಸಾಧ್ಯವಾಗಿಲ್ಲ. ಸರ್ಕಾರ ಐದು ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದ ಜನತೆಗೆ ಮೋಸ ಮಾಡಿದ್ದಾರೆ. ಮತ ಕೇಳಲು ಬರುವವರಿಗೆ ದಿಗ್ಭಂಧನ ಹಾಕುತ್ತೇವೆ. ರಾಜ್ಯಾದ್ಯಂತ ಎಲ್ಲಾ ಕಡೆಗಳಿಗೆ ಹೋಗಿ ಜಾಗೃತಿ ಮೂಡಿಸುತ್ತೇವೆ. ರೈತರ ಬಗ್ಗೆ ಮಾತನಾಡುವವರಿಲ್ಲ. ರೈತರಿಗೆ ಕೊಟ್ಟಿರುವ ಆಶ್ವಾಸನೆಗಳು ಸುಳ್ಳಾಗಿವೆ. ಸಹಕಾರಿ ಬ್ಯಾಂಕುಗಳಲ್ಲಿ ರೈತರ ಜಮೀನುಗಳು ಹರಾಜಾಗುವ ಹಂತಕ್ಕೆ ಬಂದಿವೆ. ರೈತರಿಗೆ ನೊಟೀಸ್ ಕೊಟ್ಟರೆ ದಿಗ್ಭಂಧನ ಹಾಕ್ತೇವೆ. ಕೆಪಿಟಿಸಿಎಲ್ ನವರೂ ಕೂಡಾ ರೈತರ ಬೋರ್ ವೆಲ್ ಗಳಿಗೆ ಮೀಟರ್ ಅಳವಡಿಕೆ ಮಾಡಲು ಬಂದರೆ, ಕಟ್ಟಿ ಹಾಕ್ತೇವೆ ಎಂದು ಎಚ್ಚರಿಸಿದರು.
KIADB ವತಿಯಿಂದ ತಾಲ್ಲೂಕಿನ ಜಂಗಮಕೋಟೆ ವ್ಯಾಪ್ತಿಯ ಫಲವತ್ತಾದ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಸರ್ಕಾರದ ಕ್ರಮವನ್ನು ತೀವ್ರವಾಗಿ ಖಂಡಿಸಿದ ಅವರು ದೇವನಹಳ್ಳಿ ವಿಮಾನ ನಿಲ್ದಾಣದ ಸುತ್ತಮುತ್ತಲಿನ ಕೆಂಪು ಮಣ್ಣಿನ ಸಮೃದ್ಧ ಭೂಮಿಯನ್ನು ಗುರಿಯಾಗಿಸಿಕೊಂಡು ರೈತರ ಜೀವನಾಧಾರವನ್ನು ಕಸಿದುಕೊಳ್ಳಲು ಸರ್ಕಾರ ಮುಂದಾಗಿದೆ. ಕೈಗಾರಿಕೆಗಳ ಹೆಸರಿನಲ್ಲಿ ಖಾಸಗಿ ಕಂಪನಿಗಳಿಗೆ ಅನುಕೂಲ ಮಾಡಿಕೊಡಲು ಈ ಯೋಜನೆ ರೂಪಿಸಲಾಗಿದೆ ಎಂದು ಆರೋಪಿಸಿದರು.
ಈ ಭಾಗದಲ್ಲಿ ತರಕಾರಿ ಮತ್ತು ಹಣ್ಣುಗಳನ್ನು ಹೇರಳವಾಗಿ ಬೆಳೆಯಲಾಗುತ್ತಿದ್ದು, ಇಂತಹ ಫಲವತ್ತಾದ ಭೂಮಿಯನ್ನು ನಾಶಪಡಿಸಿದರೆ ಮುಂದಿನ ದಿನಗಳಲ್ಲಿ ಆಹಾರದ ಅಭಾವ ಎದುರಾಗಲಿದೆ. ಕೈಗಾರಿಕೆಗಳಿಂದ ಪರಿಸರ ಮಾಲಿನ್ಯ ಹೆಚ್ಚಾಗಿ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಈಗಾಗಲೇ ನೀರಿನ ಸಮಸ್ಯೆ ಎದುರಿಸುತ್ತಿರುವ ಈ ಭಾಗದಲ್ಲಿ ಭೂಸ್ವಾಧೀನ ಕ್ರಮವು ರೈತರ ಬದುಕಿಗೆ ಭಾರಿ ಹೊಡೆತ ನೀಡಲಿದೆ ಎಂದು ಹೇಳಿದರು.
ಸರ್ಕಾರ ಕೂಡಲೇ ಭೂಸ್ವಾಧೀನ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕು. ಇಲ್ಲವಾದರೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು.
ರೈತ ಸಂಘದ ಯುವ ಘಟಕದ ಅಧ್ಯಕ್ಷ ಡಾ.ವಿನೋದ್ಗೌಡ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಒಕ್ಕಲುತನವನ್ನು ಉಳಿಸುವ ಉದ್ದೇಶದಿಂದ, ಕೈಗಾರಿಕೆಗಳ ಸ್ಥಾಪನೆಗಾಗಿ ರೈತರ ಫಲವತ್ತಾದ ಭೂಮಿಯನ್ನು ಬಿಟ್ಟುಕೊಡುವುದಿಲ್ಲ. ಒಂದಿಂಚು ಭೂಮಿ ಬಿಟ್ಟುಕೊಡುವುದಿಲ್ಲ. ಫಲವತ್ತಾದ ಭೂಮಿಯನ್ನೆ ಟಾರ್ಗೆಟ್ ಮಾಡುತ್ತಿದ್ದಾರೆ. ಬಾಗೇಪಲ್ಲಿ ತಾಲೂಕು ಸೇರಿದಂತೆ ಬಹಳಷ್ಟು ಕಡೆಗಳಲ್ಲಿ ಬರಡು ಭೂಮಿ ಇದೆ. ಈ ಭೂಮಿ ಬಳಕೆ ಮಾಡಿಕೊಂಡು ಕಾರ್ಖಾನೆ ನಿರ್ಮಾಣ ಮಾಡಿಕೊಳ್ಳಿ. ಕೆಐಎಡಿಬಿಯ ನೆಪ ಹೇಳಿ, ಭೂ ಸ್ವಾಧೀನ ಪಡಿಸಿಕೊಂಡು, ಬೇರೆ ಕಂಪನಿಗಳಿಗೆ ಮಾರಾಟ ಮಾಡಿಕೊಳ್ಳಲಾಗುತ್ತಿದೆ. ರೈತರಿಂದ ಭೂಮಿ ಸ್ವಾಧೀನ ಪಡಿಸಿಕೊಳ್ಳುವ ಪ್ರಯತ್ನ ಕೈ ಬಿಡಬೇಕು. ಸಾವಿರಾರು ಎಕರೆ ಭೂಮಿ ಸ್ವಾಧೀನ ಪಡಿಸಿಕೊಂಡರೆ, ಮುಂದಿನ ದಿನಗಳಲ್ಲಿ ಹೂ, ಹಣ್ಣು, ತರಕಾರಿ, ಆಹಾರ ಬೆಳೆಯುವವರು ಯಾರು ಎಂದು ಪ್ರಶ್ನೆ ಮಾಡಿದ ಅವರು, ಭೂಸ್ವಾಧೀನಕ್ಕೆ ನಮ್ಮ ಸಂಪೂರ್ಣ ವಿರೋಧವಿದೆ ಎಂದರು.
ಮಹಿಳಾ ಅಧ್ಯಕ್ಷರಾದ ಅನ್ನಪೂರ್ಣೇಶ್ವರಿ, ನಾಗಮಣಿ, ಬೆಂಗಳೂರು ಜಿಲ್ಲೆ ಅಧ್ಯಕ್ಷ ದೇವೇಗೌಡ, ರಾಜ್ಯ ಸಂಚಾಲಕ ಚಂದ್ರು, ಚಿಕ್ಕಬಳ್ಳಾಪುರ ಜಿಲ್ಲೆ ಅಧ್ಯಕ್ಷ ನರಸಿಂಹಮೂರ್ತಿ, ಹಾಸನ ಜಿಲ್ಲಾಧ್ಯಕ್ಷ ಯೋಗೇಶ್, ರಾಜೇಶ್ವರಿ ಸೇರಿದಂತೆ ವಿವಿಧ ಜಿಲ್ಲೆಗಳ ಪದಾಧಿಕಾರಿಗಳು ಹಾಜರಿದ್ದರು.
ನೂತನ ಪದಾಧಿಕಾರಿಗಳ ಪಟ್ಟಿ :
ಚಿಕ್ಕಬಳ್ಳಾಪುರ ಜಿಲ್ಲಾ ಅಧ್ಯಕ್ಷರಾಗಿ ಬಿ.ಎಂ.ನರಸಿಂಹಮೂರ್ತಿ, ಶಿಡ್ಲಘಟ್ಟ ತಾಲೂಕು ಗೌರವಾಧ್ಯಕ್ಷರಾಗಿ ಟಿ.ಕೆ. ನರಸಿಂಹಮೂರ್ತಿ, ಉಪಾಧ್ಯಕ್ಷರಾಗಿ ಶಿವಣ್ಣ.ವಿ.ಎಂ, ಕಾರ್ಯದರ್ಶಿಯಾಗಿ ಬಿ.ವಿ.ಪಾಪಣ್ಣ, ಪ್ರಧಾನ ಕಾರ್ಯದರ್ಶಿಯಾಗಿ ಜಿ.ಎನ್.ರಘುನಾಥ್ರೆಡ್ಡಿ, ಖಜಾಂಚಿಯಾಗಿ ಜಿ.ವಿ.ವೆಂಕಟಸ್ವಾಮಿ, ಸಂಚಾಲಕರಾಗಿ ಜಿ.ಬಿ.ಬೈರಾರೆಡ್ಡಿ, ಕೇಶವ, ಮಂಜುನಾಥ್, ಮುನಿಕೃಷ್ಣಪ್ಪ, ಕಾರ್ಯಾಧ್ಯಕ್ಷ ಆನಂದ್, ವಿಶ್ವನಾಥರೆಡ್ಡಿ ಮಂಜುನಾಥ್ ರನ್ನು ಆಯ್ಕೆ ಮಾಡಲಾಯಿತು.








