Sugaturu, Sidlaghatta : ಮಕ್ಕಳ ಗುಣಾತ್ಮಕ ಶಿಕ್ಷಣಕ್ಕಾಗಿ ಸರ್ಕಾರವು ಅನೇಕ ವಿವಿಧ ಉಚಿತ ಯೋಜನೆಗಳನ್ನು ಜಾರಿಗೆ ತಂದಿದ್ದು ಅವುಗಳನ್ನು ಸದುಪಯೋಗ ಪಡೆದುಕೊಳ್ಳುವ ಮೂಲಕ ಕಡ್ಡಾಯ ಮತ್ತು ಉಚಿತ ಶಿಕ್ಷಣವನ್ನು ಪ್ರತಿಯೊಬ್ಬರೂ ಪಡೆಯುವಂತಾಗಬೇಕು. ಸರ್ಕಾರಿ ಶಾಲೆಗಳ ಅಭಿವೃದ್ಧಿಯಲ್ಲಿ ಪೋಷಕರ, ಸಮುದಾಯದ ಪಾತ್ರ ಮಹತ್ವದ್ದಾಗಿದೆ ಎಂದು ಮುಖ್ಯಶಿಕ್ಷಕ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಕ್ಷಮದ ಕಾರ್ಯದರ್ಶಿ ಎಚ್.ಎಸ್.ರುದ್ರೇಶಮೂರ್ತಿ ಕರೆನೀಡಿದರು.
ತಾಲ್ಲೂಕಿನ ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಮದೃಷ್ಟಿ ಕ್ಷಮತಾ ವಿಕಾಸ ಮತ್ತು ಅನುಸಂಧಾನ ಮಂಡಲ, ರಾಯರಕಿರಣ ಫಿಸಿಯೋ ತೆರಪಿ ರೂರಲ್ ಸರ್ವೀಸ್ ವತಿಯಿಂದ ಹಮ್ಮಿಕೊಂಡಿದ್ದ ಪೋಷಕರ-ಶಿಕ್ಷಕರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸರ್ಕಾರಿ ಶಾಲೆಗಳಲ್ಲಿ ಶೈಕ್ಷಣಿಕ ಮಟ್ಟದ ಅಭಿವೃದ್ದಿಗಾಗಿ ಅನೇಕ ಯೋಜನೆಗಳು ಜಾರಿಯಲ್ಲಿವೆ. ಪೋಷಕರು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಿ ಉತ್ತಮ ಶಿಕ್ಷಣ ಕೊಡಿಸುವತ್ತ ಆದ್ಯತೆ ನೀಡಬೇಕು. ಪೋಷಕರು ಖಾಸಗಿ ಶಾಲೆಗಳ ವ್ಯಾಮೋಹವನ್ನು ಬಿಟ್ಟು ಸರ್ಕಾರಿ ಶಾಲೆಗಳನ್ನು ಉಳಿಸಬೇಕಿದೆ. ಸದ್ಯ ಸುಗಟೂರು ಶಾಲೆಯಲ್ಲಿ ಇಂಗ್ಲೀಷ್ ಮಾಧ್ಯಮದ ತರಗತಿಗಳೂ ನಡೆಯುತ್ತಿದ್ದು ಎಲ್ಲಾ ಅರ್ಹವಯಸ್ಸಿನ ಮಕ್ಕಳನ್ನು ತಪ್ಪದೇ ಸರ್ಕಾರಿ ಶಾಲೆಗೆ ಸೇರಿಸಬೇಕು ಎಂದರು.
ಮಕ್ಕಳ ಆರೋಗ್ಯ, ನೈರ್ಮಲ್ಯ, ಡಿಜಿಟಲ್ ಬೋಧನೆಗೆ ಆದ್ಯತೆ: ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ, ಹಾಜರಾತಿಯನ್ನು ಹೆಚ್ಚಿಸುವುದರೊಂದಿಗೆ ಮಕ್ಕಳಲ್ಲಿನ ಅಪೌಷ್ಟಿಕತೆ ನೀಗಿಸಲು ಪೂರಕವಾಗಿ ಆರೋಗ್ಯಯುತ ನೈರ್ಮಲ್ಯಪೂರಕವಾದ ಬಿಸಿಯೂಟ, ಕ್ಷೀರಭಾಗ್ಯ ಯೋಜನೆಯಲ್ಲದೇ ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಶೂ ಮತ್ತು ಸಾಕ್ಸ್ ವಿತರಣೆಯೋಜನೆ ಅಸ್ತಿತ್ವದಲ್ಲಿವೆ. ಉಪಗ್ರಹಾಧಾರಿತ ಎಜುಸ್ಯಾಟ್, ಬಾನುಲಿ ಕಾರ್ಯಕ್ರಮ, ವಿಶೇಷ ಸಿ.ಡಿ ಮತ್ತು ಡಿ.ವಿ.ಡಿಗಳ ಮೂಲಕ ಡಿಜಿಟಲ್ ಬೋದನೆ, ತಿಂಗಳಿಗೊಮ್ಮೆ ಸಾಂಸ್ಕೃತಿಕ, ಸಹಪಠ್ಯಚಟುವಟಿಕೆಗಳಲ್ಲದೇ ಅನೇಕ ಕಾರ್ಯಕ್ರಮಗಳು ನಡೆಯುತ್ತಿವೆ. ಮಕ್ಕಳ ಸರ್ವತೋಮುಖ ಉತ್ತಮ ಕಲಿಕೆ ಮತ್ತು ಪ್ರಗತಿಯಲ್ಲಿ ಶಾಲಾ ಪರಿಸರ, ಪೋಷಕರ ಜವಾಬ್ದಾರಿ ಹೆಚ್ಚು ಪಾತ್ರ ವಹಿಸಲಿದೆ ಎಂದರು.
ಶಾಲಾ ಮ್ಯಾಗಜೀನ್ ಬಿಡುಗಡೆ ಮಾಡಲಾಯಿತು. ಸಕ್ಷಮ ಮತ್ತು ರಾಯರ ಕಿರಣ ಸಂಸ್ಥೆಗಳ ವತಿಯಿಂದ ಸುಗಟೂರು, ಜಂಗಮಕೋಟೆ, ವಿಜಯಪುರ ಪಟ್ಟಣದ ವಿವಿಧ ಭಾಗಗಳ ವಿಶೇಷಚೇತನ ಮಕ್ಕಳಿಗೆ ದಿನಬಳಕೆಯ ವಸ್ತುಗಳ ಕಿಟ್, ಟೀಶರ್ಟ್, ಡಯಾಪರ್ ಗಳನ್ನು ಉಚಿತವಾಗಿ ವಿತರಿಸಲಾಯಿತು.
ಎಸ್.ಡಿ.ಎಂ.ಸಿ ಅಧ್ಯಕ್ಷ ವೆಂಕಟೇಶ್, ಉಪಾಧ್ಯಕ್ಷೆ ಭಾರತಿ, ಸದಸ್ಯರಾದ ಎಸ್.ಎಲ್.ನಾರಾಯಣಸ್ವಾಮಿ, ಬಿ.ಆರ್.ಸಾವಿತ್ರಮ್ಮ, ಎಂ.ನಾಗೇಶ್, ನಾಗೇಂದ್ರ, ಬಿ.ಎನ್.ಮಂಜುಳಾ, ಸಂತೋಷ್, ನಾಗವೇಣಿ, ಸಿದ್ಧಪ್ಪ, ಸಕ್ಷಮದ ಪದಾಧಿಕಾರಿ ಚನ್ನಕೇಶಮೂರ್ತಿ, ಶಿಕ್ಷಕರಾದ ಎ.ಬಿ.ನಾಗರಾಜು, ಮಧು ಹಾಜರಿದ್ದರು.








