Sidlaghatta : “ಬ್ರಿಟಿಷರ ವಿರುದ್ಧ ಹೋರಾಡಿ ದೇಶಾಭಿಮಾನ ಮೆರೆದ ಕಿತ್ತೂರು ರಾಣಿ ಚನ್ನಮ್ಮ ಅವರ ತ್ಯಾಗ, ಇಂದಿನ ಯುವಜನತೆಗೆ ಸ್ಫೂರ್ತಿ ಮತ್ತು ಶಕ್ತಿಯ ಮೂಲವಾಗಬೇಕು” ಎಂದು ಗ್ರೇಡ್–2 ತಹಶೀಲ್ದಾರ್ ರಾಜೇಂದ್ರ ಹೇಳಿದರು.
ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಆಯೋಜಿಸಲಾದ ಕಿತ್ತೂರು ರಾಣಿ ಚನ್ನಮ್ಮ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.
ರಾಜೇಂದ್ರ ಅವರು, “ಕಿತ್ತೂರು ರಾಣಿ ಚನ್ನಮ್ಮ ತಮ್ಮ ರಾಜ್ಯದ ಗೌರವ ಮತ್ತು ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ನಿಂತು ಹೋರಾಟ ಮಾಡಿದ ಪ್ರಥಮ ವೀರಮಹಿಳೆ. ‘ಸೂರ್ಯ ಮುಳುಗದ ನಾಡಿನವರು’ ಎಂದು ಕರೆಯಲ್ಪಡುತ್ತಿದ್ದ ಬ್ರಿಟಿಷರನ್ನು ಸದೆಬಡಿಯುವ ಮೂಲಕ, ವಿಶ್ವವೇ ನಿಬ್ಬೆರಗಾಗಿ ನೋಡುವಂತಹ ಸಾಹಸ ತೋರಿದರು. ದೇಶಸೇವೆಗೆ ಜೀವ ತ್ಯಾಗ ಮಾಡಿದ ಅವರ ಬಲಿದಾನವನ್ನು ಸದಾ ಸ್ಮರಿಸಬೇಕು,” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಪುರಸ್ಕಾರಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ಬಸವೇಶ್ವರ ಸೇವಾ ಮತ್ತು ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಬಿ.ಸಿ. ನಂದೀಶ್, ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಮೇಲೂರು ಮಂಜುನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ನರೇಂದ್ರ ಕುಮಾರ್, ಖಾದಿ ನಿಗಮ ಮಂಡಳಿ ಅಧ್ಯಕ್ಷ ಗಣೇಶ್, ಲಕ್ಷಣ್ ರಾಜು, ಬಸವರಾಜು, ಚಂದ್ರಶೇಖರ್ ಬಾಬು ಹಾಗೂ ಇತರರು ಉಪಸ್ಥಿತರಿದ್ದರು.







