Sidlaghatta : ಶಿಡ್ಲಘಟ್ಟದಿಂದ ದಿಬ್ಬೂರಹಳ್ಳಿ ಕಡೆಗೆ ಸಂಚರಿಸುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ನಲ್ಲಿ ವ್ಯಕ್ತಿಯೋರ್ವ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ನಗರದಲ್ಲಿ ಗುರುವಾರ ನಡೆದಿದೆ.
ಮೃತನನ್ನು ತಾಲ್ಲೂಕಿನ ರಾಮಲಿಂಗಪುರದ ಗಾರೆ ಕೆಲಸದ ಪಿಳ್ಳವೆಂಕಟರಮಣಪ್ಪ ಎನ್ನಲಾಗಿದೆ.
ಮೃತ ವ್ಯಕ್ತಿ ಅನಾರೋಗ್ಯದಿಂದ ಬಳಲುತ್ತಿದ್ದು ಗುರುವಾರ ಬೆಳಗ್ಗೆ ನಗರದ ಸಾರ್ವಜನಿಕ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದು ವಾಪಸ್ ತಮ್ಮ ಗ್ರಾಮಕ್ಕೆ ತೆರಳಲು ಕೆ.ಎಸ್.ಆರ್.ಟಿ.ಸಿ ಬಸ್ ಹತ್ತಿದ್ದು, ಬಸ್ ನಗರದ ತಾಲ್ಲೂಕು ಕಚೇರಿ ಮುಂಭಾಗ ಹೋಗುತ್ತಿದ್ದಂತೆ ಕುಸಿದುಬಿದ್ದಿದ್ದಾನೆ. ಘಟನೆಯಿಂದ ಗಾಭರಿಗೊಂಡ ಬಸ್ ಚಾಲಕ ಮತ್ತು ಪ್ರಯಾಣಿಕರು ಬಸ್ ಸಮೇತ ಸಾರ್ವಜನಿಕ ಆಸ್ಪತ್ರೆಗೆ ಕರೆತಂದರಾದರೂ ವ್ಯಕ್ತಿ ಅಷ್ಟೊತ್ತಿಗೆ ಮೃತ ಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿಡಲಾಗಿದೆ.