ಶಿಡ್ಲಘಟ್ಟ ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಚಿಕ್ಕಬಳ್ಳಾಪುರ ಜಿಲ್ಲಾ ಲೋಕಾಯುಕ್ತರಿಂದ ಆಯೋಜಿಸಲಾಗಿದ್ದ ಸಾರ್ವಜನಿಕ ಕುಂದುಕೊರತೆಗಳ ಬಗ್ಗೆ ಅಹವಾಲುಗಳನ್ನು ಸ್ವೀಕರಿಸುವ ಸಭೆಯಲ್ಲಿ ಸರ್ಕಾರಿ ಅಧಿಕಾರಿಗಳನ್ನುದ್ದೇಶಿಸಿ ಲೋಕಾಯುಕ್ತ ಎಸ್ ಪಿ ಎಂ.ಎಲ್.ಪುರುಷೋತ್ತಮ್ ಮಾತನಾಡಿದರು.
ಸರ್ಕಾರಿ ಅಧಿಕಾರಿಗಳು ಎಷ್ಟೇ ಉನ್ನತ ಹುದ್ದೆಯಲ್ಲಿದ್ದರೂ ತಮ್ಮ ಸೇವಾವಧಿಯಲ್ಲಿ ಮಾಡಿದ ಒಳ್ಳೆಯ ಕೆಲಸಗಳಿಂದ ಮಾತ್ರ ಜನರಿಗೆ ನೆನಪಿನಲ್ಲಿ ಉಳಿಯುತ್ತಾರೆ. ಜನರ ಹಾಗು ಸರ್ಕಾರದ ಸೇವಕರಾಗಿರುವ ನಾವುಗಳು ನಮ್ಮ ಅಧಿಕಾರಾವಧಿಯಲ್ಲಿ ಶೇ 60 ರಷ್ಟಾದರೂ ಒಳ್ಳೆಯ ಕೆಲಸಗಳನ್ನು ಮಾಡಬೇಕು. ಯಾವುದೇ ವ್ಯಕ್ತಿ ಸರ್ಕಾರಿ ಕಚೇರಿಗೆ ಬಂದಾಗ ಕುಳಿತುಕೊಳ್ಳಲು ಹೇಳಿ ಒಂದೆರಡು ನಿಮಿಷ ಅವರ ಸಮಸ್ಯೆಯ ಬಗ್ಗೆ ಆಲಿಸುವುದನ್ನು ರೂಡಿಸಿಕೊಳ್ಳಬೇಕು. ಮುಖ್ಯವಾಗಿ ಪೊಲೀಸ್ ಇಲಾಖೆ ಸಿಬ್ಬಂದಿ ಈ ಬಗ್ಗೆ ಹೆಚ್ಚಿನ ಗಮನ ನೀಡಬೇಕು ಎಂದು ಅವರು ಹೇಳಿದರು.
ಭ್ರಷ್ಟಾಚಾರ ಎಲ್ಲೆಡೆಯೂ ತಾಂಡವವಾಡುತ್ತಿದ್ದು ನಿರ್ಮೂಲನೆ ಮಾಡುವುದು ಕಷ್ಟವಾದರೂ ತಡೆಗಟ್ಟುವ ಕೆಲಸಕ್ಕೆ ಸಾರ್ವಜನಿಕರ ಸಹಕಾರ ಅತ್ಯಗತ್ಯ, ಸಾರ್ವಜನಿಕರು ಪ್ರಶ್ನೆ ಮಾಡುವುದನ್ನು ರೂಡಿಸಿಕೊಳ್ಳಬೇಕು ಎಂದರು.
ಸರ್ಕಾರಿ ಅಧಿಕಾರಿಗಳು ಕಡ್ಡಾಯವಾಗಿ ತಮ್ಮ ಇಲಾಖೆಗಳಲ್ಲಿ ದಿನವಹಿ ನಗದು ಪುಸ್ತಕ (ಕ್ಯಾಷ್ ಡಿಪಾಸಿಟ್ ರಿಜಿಸ್ಟರ್) ಇಡಬೇಕು. ಲೋಕಾಯುಕ್ತರಿಂದ ದಾಳಿ ನಡೆದಾಗ ನಗದು ಪುಸ್ತಕದಲ್ಲಿ ಎಷ್ಟಿದೆಯೋ ಅದಕ್ಕಿಂತ ಹೆಚ್ಚಿನ ಹಣ ಇರುವಂತಿಲ್ಲ ಹಾಗಾಗಿ ಪ್ರತಿಯೊಬ್ಬರೂ ಎಚ್ಚರಿಕೆಯಿಂದ ಕೆಲಸ ಮಾಡುವ ಜೊತೆಗೆ ಸಾರ್ವಜನಿಕರ ಭಾವನೆಗಳನ್ನು ಕೆರಳಿಸುವ ರೀತಿಯಲ್ಲಿ ಯಾವುದೇ ಸರ್ಕಾರಿ ಅಧಿಕಾರಿ, ಸಿಬ್ಬಂದಿ ವರ್ತಿಸಬಾರದು. ಕಳೆದು ಹೋದ ಸಮಯ ಮತ್ತೆ ಬರುವುದಿಲ್ಲ ಎಂಬುದನ್ನು ಪ್ರತಿಯೊಬ್ಬ ಸರ್ಕಾರಿ ನೌಕರರು ಮನಗಂಡು ತಮ್ಮ ತಮ್ಮ ಸೇವಾವಧಿಯಲ್ಲಿ ಒಂದಷ್ಟು ಉತ್ತಮ ಕೆಲಸಗಳನ್ನು ಮಾಡಬೇಕು ಎಂದರು.
ಪೊಲೀಸ್ ಇಲಾಖೆ, ನಗರಸಭೆ, ತಾಲ್ಲೂಕು ಕಚೇರಿ ಸೇರಿದಂತೆ ವಿವಿಧ ಇಲಾಖೆಗಳಿಗೆ ಸಂಬಂದಿಸಿದಂತೆ ಅರ್ಜಿದಾರರಿಂದ ಒಟ್ಟು 12 ಅರ್ಜಿಗಳನ್ನು ಸ್ವೀಕರಿಸಲಾಯಿತು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಬಿ.ಎಸ್.ರಾಜೀವ್, ತಾಲ್ಲೂಕು ಪಂಚಾಯಿತಿ ನರೇಗಾ ಸಹಾಯಕ ನಿರ್ದೇಶಕ ಚಂದ್ರಪ್ಪ, ಲೋಕಾಯುಕ್ತ ಇನ್‌ಸ್ಪೆಕ್ಟರ್‌ಗಳಾದ ಸಲೀಂ ಸಿ ನದಾಫ್, ಮೋಹನ್, ಸಿಬ್ಬಂದಿಗಳಾದ ಅಲೀಂ ಮುರ್ತುಜ, ಮಾಳಪ್ಪ, ಮುಸ್ತಫ, ಖದೀರ್, ಮಂಜುನಾಥ, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.