Home News ತಾಲ್ಲೂಕು ಮಟ್ಟದ ಬೃಹತ್ ಆರೋಗ್ಯ‌ ಮೇಳ ಮತ್ತು ರಕ್ತದಾನ ಶಿಬಿರ

ತಾಲ್ಲೂಕು ಮಟ್ಟದ ಬೃಹತ್ ಆರೋಗ್ಯ‌ ಮೇಳ ಮತ್ತು ರಕ್ತದಾನ ಶಿಬಿರ

0
Sidlaghatta Mega Health Camp

ಶಿಡ್ಲಘಟ್ಟ ನಗರದ ಶ್ರೀ ವಾಸವಿ ವಿದ್ಯಾಸಂಸ್ಥೆಯ ಆವರಣದಯಲ್ಲಿ ಏ. 25ರಂದು ಬೆಳಿಗ್ಗೆ 9.30 ರಿಂದ ಸಂಜೆ 4 ಗಂಟೆವರೆಗೆ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಅಂಗವಾಗಿ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿ ತಾಲ್ಲೂಕು ಮಟ್ಟದ ಬೃಹತ್ ಆರೋಗ್ಯ ಮೇಳ ಆಯೋಜಿಸಲಾಗಿದೆ ಎಂದು ತಹಶೀಲ್ದಾರ್ ಬಿ.ಎಸ್.ರಾಜೀವ್ ಮಾಹಿತಿ ನೀಡಿದರು. 

ಬೃಹತ್ ಆರೋಗ್ಯ‌ ಮೇಳ ಮತ್ತು ರಕ್ತದಾನ ಶಿಬಿರದ ಅಂಗವಾಗಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಆರೋಗ್ಯ ‌ಇಲಾಖೆಯಿಂದ ಬೃಹತ್ ಆರೋಗ್ಯ‌ ಮೇಳ ಮತ್ತು ರಕ್ತದಾನ ಶಿಬಿರ ನಡೆಯಲಿದೆ. ಈ‌ ಮೇಳದಲ್ಲಿ ನುರಿತ ತಜ್ಞ ವೈದ್ಯರು ಆಗಮಿಸಲಿದ್ದು, ಅವಶ್ಯಕತೆ ಇರುವವರಿಗೆ ಸೂಕ್ತ ಸಲಹೆ ಹಾಗೂ ಚಿಕಿತ್ಸೆ ನೀಡುತ್ತಾರೆ ಎಂದು ತಿಳಿಸಿದರು.

ಮೇಳದಲ್ಲಿ ಹೃದ್ರೋಗ, ಸ್ತ್ರೀರೋಗ, ಮಕ್ಕಳು, ಎಲುಬು‌ ಮತ್ತು ಕೀಲು, ಕ್ಯಾನ್ಸರ್ ತಜ್ಞರು, ಮಾನಸಿಕ ರೋಗ, ಶಸ್ತ್ರಚಿಕಿತ್ಸೆ, ಕಿವಿ ಮೂಗು ಮತ್ತು ಗಂಟಲು, ನೇತ್ರ, ಚರ್ಮ ರೋಗ, ದಂತ ತಜ್ಞರು ಹಾಗೂ ಭಾರತೀಯ ಆಯುಷ್ ವೈದ್ಯ ಪದ್ಧತಿಯ ತಜ್ಞರು ಭಾಗವಹಿಸಲಿದ್ದಾರೆ‌ ಎಂದು ತಿಳಿಸಿದರು.

‌ಮೇಳದಲ್ಲಿ ಉಚಿತ ಆರೋಗ್ಯ ಸೇವೆ ಲಭಿಸಲಿದೆ. ಜತೆಗೆ ಉಚಿತ ಪ್ರಯೋಗಾಲಯ ಪರೀಕ್ಷೆ, ಉಚಿತ ಔಷಧಿ ವಿತರಣೆ, ಕ್ಷಯರೋಗ ಪರೀಕ್ಷೆ, ಯೋಗ ಮತ್ತು ಧ್ಯಾನ, ಡಿಜಿಟಲ್ ಐಡಿ‌ ಕಾರ್ಡ್ ವಿತರಣೆ, ಆಯುಷ್ಮಾನ್ ಭಾರತ್ ಕಾರ್ಡ್ ವಿತರಣೆ, ಇ- ಸಂಜೀವಿನಿ ಮೂಲಕ ತಜ್ಞ ವೈದ್ಯರ ಸಂಪರ್ಕ, ಸಕ್ಕರೆ ಕಾಯಿಲೆ, ರಕ್ತದೊತ್ತಡ, ಕ್ಯಾನ್ಸರ್ ಪರೀಕ್ಷೆ, ನೇತ್ರದಾನ, ಅಂಗಾಂಗ‌ ದಾನ‌ ಕುರಿತು ಮಾಹಿತಿ ನೀಡಲಾಗುತ್ತದೆ. ಆರೋಗ್ಯ ಸೇವೆಗಳ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.

ಮೇಳದಲ್ಲಿ ಭಾಗವಹಿಸುವ ಸಾರ್ವಜನಿಕರು ಈ ಹಿಂದೆ ತಾವು‌ ಚಿಕಿತ್ಸೆ ಪಡೆದ ವೈದ್ಯರ ಚೀಟಿಯ ಜತೆಗೆ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಹಾಗೂ ಮೊಬೈಲ್ ತರತಕ್ಕದು. ಜನರು ಮೇಳದ ಪ್ರಯೋಜನ ಪಡೆಯಬೇಕಾಗಿದೆ ಎಂದು ತಿಳಿಸಿದರು.

 ರಕ್ತದಾನ ಶಿಬಿರದಲ್ಲಿ ಎಲ್ಲಾ ಸಂಘಟನೆಯವರೂ, ರೈತ ಬಾಂಧವರು, ಸಾರ್ವಜನಿಕರು ಭಾಗವಹಿಸಿ ಕನಿಷ್ಟ ಒಂದು ಸಾವಿರ ಯೂನಿಟ್ ರಕ್ತ ಸಂಗ್ರಹಿಸುವ ಗುರಿಯನ್ನು ಸಾಧಿಸಬೇಕಿದೆ ಎಂದರು.

 ನಗರ ಸಭೆ ಆಯುಕ್ತ ಆರ್.ಶ್ರೀಕಾಂತ್ ಮಾತನಾಡಿ, ಸೋಮವಾರ ಸಂತೆಗೆ ತೊಂದರೆಯಾದಂತೆ ಬೃಹತ್ ಆರೋಗ್ಯ‌ ಮೇಳ ಮತ್ತು ರಕ್ತದಾನ ಶಿಬಿರ ನಡೆಸಲಿದ್ದೇವೆ. ಪ್ರತಿಯೊಂದು ವಾರ್ಡಿನಲ್ಲೂ ವ್ಯಾಪಕ ಪ್ರಚಾರ ನಡೆಸಿದ್ದೇವೆ. ನಗರಸಭೆ ಸದಸ್ಯರು ತಮ್ಮ ವಾರ್ಡಿನಲ್ಲಿನ ಜನರಿಗೆ ವಿಷಯ ತಿಳಿಸಿ ಅವರನ್ನು ಕರೆತರಬೇಕು. ರಕ್ತದಾನ ಮಾಡುವುದರಲ್ಲೂ ಸಹ ಈ ಹಿಂದಿನ ದಾಖಲೆಯನ್ನು ಮುರಿಯಬೇಕಿದೆ ಎಂದರು.

ಸಭೆಯಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ, ನಗರ ಸಭೆ ಆಯುಕ್ತ ಆರ್.ಶ್ರೀಕಾಂತ್, ಆಸ್ಪತ್ರೆಯ ಸಿಬ್ಬಂದಿ ದೇವರಾಜ್, ಲೋಕೇಶ್, ಎನ್ ಪಿ ಎಸ್ ಅಧ್ಯಕ್ಷ ಗಜೇಂದ್ರ, ನೌಕರರ ಸಂಘದ ಅಧ್ಯಕ್ಷ ಸುಬ್ಬಾರೆಡ್ಡಿ ಹಾಜರಿದ್ದರು.‌

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version