Melur, Sidlaghatta, Chikkaballapur : ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮದ 13 ವರ್ಷದ ಪುನೀತ್ ಮನೋಹರ್, ಜೂನಿಯರ್ ರಾಷ್ಟ್ರೀಯ ಟೆನ್ನಿಸ್ ರ್ಯಾಂಕಿಂಗ್ (14 ವರ್ಷದೊಳಗಿನ) ನಲ್ಲಿ ಪ್ರಥಮ ಸ್ಥಾನ ಪಡೆದುಕೊಂಡು ರಾಜ್ಯಕ್ಕೆ ಮತ್ತು ಶಿಡ್ಲಘಟ್ಟಕ್ಕೆ ಹೊಸ ಗೌರವ ತಂದಿದ್ದಾನೆ. 12 ವರ್ಷದೊಳಗಿನ ವಿಭಾಗದಲ್ಲೂ ನಂಬರ್ 1 ಆಗಿದ್ದ ಪುನೀತ್, ಈಗ 14 ವರ್ಷದೊಳಗಿನ ರ್ಯಾಂಕಿಂಗ್‌ನಲ್ಲೂ ನಂ.1 ಸ್ಥಾನಕ್ಕೇರುತ್ತ ಅಪರೂಪದ ಸಾಧನೆ ಮಾಡಿ ಗಮನ ಸೆಳೆದಿದ್ದಾನೆ.
ಪುನೀತ್ ಸಿಂಗಲ್ಸ್ ಹಾಗೂ ಡಬಲ್ಸ್ ಸೇರಿದು 871.25 ಪಾಯಿಂಟ್ ಗಳಿಸಿ ರಾಷ್ಟ್ರಮಟ್ಟದಲ್ಲಿ ಮೊದಲಿಗನಾಗಿದ್ದಾನೆ. ಉತ್ತರ ಪ್ರದೇಶದ ಕೌಸ್ತುಬ್ ಸಿಂಗ್ (776.8 ಪಾಯಿಂಟ್) ದ್ವಿತೀಯ ಸ್ಥಾನದಲ್ಲಿದ್ದಾರೆ.
ಕೊನೆಯ ನಾಲ್ಕು ತಿಂಗಳುಗಳಿಂದ ಚಂಡೀಗಡದ ರೌಂಡ್ ಗ್ಲಾಸ್ ಟೆನ್ನಿಸ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ ಪುನೀತ್, ತಾಯಿ ನಮ್ರತಾ ಅವರೊಂದಿಗೆ ಅಲ್ಲಿ ನೆಲೆಸಿದ್ದಾನೆ.
ಪುನೀತ್ ಮನೋಹರ್‌ರ ಸಾಧನೆಗಳು
- 31 ವಾರಗಳ ಕಾಲ ಭಾರತದ ನಂ.1 (12 ವರ್ಷದೊಳಗಿನ)
- 81 ವಾರಗಳ ಕಾಲ ಕರ್ನಾಟಕ ನಂ.1
- ರಾಷ್ಟ್ರಮಟ್ಟದ ಸಿಂಗಲ್ಸ್ ಮತ್ತು ಡಬಲ್ಸ್ — ಚಾಂಪಿಯನ್
- ನೇಪಾಳದ ಕಠ್ಮಂಡುವಿನಲ್ಲಿ ನಡೆದ ದಕ್ಷಿಣ ಏಷ್ಯಾ ಅಂತರಾಷ್ಟ್ರೀಯ (U-12) ಚಿನ್ನದ ಪದಕ
- ಕಝಕಿಸ್ತಾನ ಏಷ್ಯಾ ಚಾಂಪಿಯನ್‌ಶಿಪ್ — 4ನೇ ಸ್ಥಾನ
- ಅಮೆರಿಕಾದ ಟೆಕ್ಸಾಸ್‌ನಲ್ಲಿ ನಡೆದ ಆರೆಂಜ್ ಬೌಲ್ ಸಬ್-ಜೂನಿಯರ್ ಗ್ರ್ಯಾಂಡ್ ಸ್ಲಾಮ್ — 4ನೇ ಸ್ಥಾನ
- ಯೂರೋಪಿನ ಹಲವು ಪಂದ್ಯಾವಳಿಗಳಲ್ಲಿ ಮೂರನೇ ಸ್ಥಾನ
- ಅಜರ್‌ಬೈಜಾನ್ (ಬಾಕು), ಸ್ಪೇನ್ (ಬಾರ್ಸಿಲೋನಾ), ಫಿಲಿಪ್ಪೀನ್ — 14 ವರ್ಷದೊಳಗಿನ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ
- ದೆಹಲಿ, ಜೈಪುರ್ ಮೊದಲಾದ ನ್ಯಾಷನಲ್ ಈವೆಂಟ್‌ಗಳಲ್ಲಿ ಸಿಂಗಲ್ಸ್ ಮತ್ತು ಡಬಲ್ಸ್ ಚಾಂಪಿಯನ್
ಈ ಸಾಧನೆಗಳಿಂದ ಪುನೀತ್ ಮನೋಹರ್ ದೇಶವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುವ ಭರವಸೆಯ ತಾರೆ ಆಗಿ ಗುರುತಿಸಿಕೊಂಡಿದ್ದಾನೆ.
“ನನ್ನ ಮಗ ಪುನೀತ್, 14 ವರ್ಷದೊಳಗಿನ ಟೆನ್ನಿಸ್ ಟೆನ್ನಿಸ್ ರ್ಯಾಂಕಿಂಗ್ ನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿರುವುದು ನನಗೆ ಹಾಗೂ ನನ್ನ ಕುಟುಂಬಕ್ಕೆ ಹೆಮ್ಮೆಯ ವಿಷಯವಾಗಿದೆ.ದೇಶವನ್ನು ಅವನು ಪ್ರತಿನಿಧಿಸಿ ಅಂತಾರಾಷ್ಟ್ರೀಯಮಟ್ಟದಲ್ಲಿ ದೇಶಕ್ಕೆ ಕೀರ್ತಿ ತರಬೇಕೆಂಬುದು ನಮ್ಮ ಅಭಿಲಾಷೆ” ಎಂದು ಶಿಡ್ಲಘಟ್ಟದಲ್ಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿ ಆಗಿರುವ ಪುನೀತ್ ತಂದೆ ಡಾ.ಮನೋಹರ್ ತಿಳಿಸಿದ್ದಾರೆ.
For Daily Updates WhatsApp ‘HI’ to 7406303366









