Sidlaghatta : ಶಾಸಕ ಬಿ.ಎನ್.ರವಿಕುಮಾರ್ ಅವರು ಕೇಂದ್ರದ ಭಾರೀ ಕೈಗಾರಿಕೆಗಳ ಸಚಿವ ಎಚ್.ಡಿ.ಕುಮಾಸ್ವಾಮಿ ಅವರನ್ನು ಭೇಟಿ ಮಾಡಿ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಸರ್ಕಾರಿ ಶಾಲೆಗಳು ಮತ್ತು ಅಂಗನವಾಡಿ ಕೇಂದ್ರಗಳನ್ನು ಅಭಿವೃದ್ಧಿಪಡಿಸಲು ಸಿ.ಎಸ್.ಆರ್ ಅನುದಾನ ಕೊಡಿಸುವಂತೆ ಮನವಿ ಸಲ್ಲಿಸಿದರು.
ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ 151 ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡವಿಲ್ಲ. ಸರ್ಕಾರಿ ಶಾಲೆಯಲ್ಲಿ, ಬಾಡಿಗೆ ಕಟ್ಟಡಗಳಲ್ಲಿ, ಸಮುದಾಯ ಭವನಗಳಲ್ಲಿ ಅವು ಕಾರ್ಯನಿರ್ವಹಿಸುತ್ತಿವೆ. ದುರಸ್ಥಿ ಮಾಡಬೇಕಾಗಿರುವ ಅಂಗನವಾಡಿ ಕೇಂದ್ರಗಳ ಸಂಖ್ಯೆ 83. ನೀರು, ವಿದ್ಯುತ್ ಸಂಪರ್ಕ, ಶೌಚಾಲಯ, ಕಟ್ಟಡದ ಮೇಲ್ಚಾವಣಿ, ಸಂಪು ಮುಂತಾದ ದುರಸ್ಥಿ ಕಾರ್ಯಗಳು ತುರ್ತಾಗಿ ಮಾಡಬೇಕಿದೆ.
ತಾಲ್ಲೂಕಿನ 17 ಸರ್ಕಾರಿ ಪ್ರೌಢಶಾಲೆಗಳಲ್ಲಿ ಕೊಠಡಿಗಳ ದುರಸ್ತಿ ಕಾರ್ಯ ನಡೆಯಬೇಕಿದ್ದು, ತುರ್ತಾಗಿ ಮಾಡಿಸಬೇಕಿರುವ ಕಾಮಗಾರಿಗಳ ಅಂದಾಜು ಮೊತ್ತ ಒಂದೂ ಕಾಲು ಕೋಟಿ ರೂಗಳೆಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮಾಹಿತಿ ನೀಡಿದೆ. ಹೆಚ್ಚಿನ ಸಿ.ಎಸ್.ಆರ್ ಅನುದಾನ ಸಿಕ್ಕರೆ, ಕ್ಷೇತ್ರದ ಸರ್ಕಾರಿ ಶಿಕ್ಷಣ ವ್ಯವಸ್ಥೆ ಉತ್ತಮಗೊಳ್ಳುತ್ತದೆ. ಆ ಮೂಲಕ ಹಿಂದುಳಿದಿರುವ ಜನರಿಗೆ ಉತ್ತಮ ಭವಿಷ್ಯ ನಿರ್ಮಾಣಕ್ಕೆ ಅಡಿಗಲ್ಲನ್ನು ಹಾಕಿದಂತೆ ಆಗುತ್ತದೆ ಎಂದು ಮನವಿ ಮಾಡಿದರು.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ನಾನು ನೀಡಿದ ಮನವಿಯ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಆದಷ್ಟು ಬೇಗ ಸಿ.ಎಸ್.ಆರ್ ಅನುದಾನವನ್ನು ಕೊಡಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಎಚ್.ಡಿ.ಕೆ ಭೇಟಿಯ ಬಗ್ಗೆ ಶಾಸಕ ಬಿ.ಎನ್.ರವಿಕುಮಾರ್ ಮಾಹಿತಿ ನೀಡಿದರು.