Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಪುರಬೈರನಹಳ್ಳಿ ಗ್ರಾಮದಲ್ಲಿ ಗಣಿಗಾರಿಕೆಗೆ ಅನುಮತಿ ಕೊಡಲು, ಹಿಂದಿನ ಜಿಲ್ಲಾಧಿಕಾರಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕರು, ಹಾಗೂ ಹಿಂದಿನ ಉಸ್ತುವಾರಿ ಸಚಿವರು 30 ಕೋಟಿ ಲಂಚ ಪಡೆದುಕೊಂಡಿದ್ದಾರೆ ಎಂದು ಶಾಸಕ ಬಿ.ಎನ್.ರವಿಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.
ವಿಧಾನಸೌಧದಲ್ಲಿ ನಡೆಯುತ್ತಿರುವ ಸದನದಲ್ಲಿ ತಾಲ್ಲೂಕಿನ ಸಾದಲಿ ಹೋಬಳಿಯ ಪುರ ಬೈರನಹಳ್ಳಿಯಲ್ಲಿ ಗಣಿಗಾರಿಕೆಗೆ ನೀಡಿರುವ ಅನುಮತಿಯ ಕುರಿತು, ಪ್ರಸ್ತಾಪ ಮಾಡಿರುವ ಅವರು, ತಾಲ್ಲೂಕಿನ ಸಾದಲಿ ಹೋಬಳಿ ಪುರಬೈರನಹಳ್ಳಿ ಗ್ರಾಮದ ಸ.ನಂ.2 ರಲ್ಲಿ ಒಂದೇ ಕುಟುಂಬದವರಿಗೆ 60 ಎಕರೆ 27 ಗುಂಟೆ ಜಮೀನನ್ನು ಮಂಜೂರು ಮಾಡಿದ್ದಾರೆ.
ಈ ಜಮೀನಿನಲ್ಲಿ ಗಣಿಗಾರಿಕೆ ಆರಂಭಿಸಿದರೆ, ಅಲ್ಲಿ ಅರಣ್ಯ ಪ್ರದೇಶದಲ್ಲಿರುವ ಪ್ರಾಣಿಗಳು, ಪಕ್ಷಿಗಳಿಗೆ ತೊಂದರೆಯಾಗುತ್ತದೆ. ರೈತರಿಗೂ ತೊಂದರೆಯಾಗುತ್ತದೆ. ಒಂದು ವೇಳೆ ಸರ್ಕಾರ, ಗಣಿಗಾರಿಕೆ ರದ್ದುಪಡಿಸದೆ ಆರಂಭಿಸಿದರೆ, ಅಲ್ಲಿ ದೊಡ್ಡಮಟ್ಟದ ಗಲಾಟೆಯಾಗುತ್ತದೆ. ಮುಂದೆ ಆಗುವಂತಹ ಅನಾಹುತಗಳಿಗೆ ಸರ್ಕಾರ ನೇರ ಹೊಣೆಯಾಗಬೇಕಾಗುತ್ತದೆ.
ಗಣಿಗಾರಿಕೆಗೆ ಅವಕಾಶ ಕೊಟ್ಟಿರುವ ಪ್ರದೇಶದ ಸಮೀಪದಲ್ಲಿ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ 300 ಮಂದಿ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ದಿಬ್ಬೂರಹಳ್ಳಿ ಪೊಲೀಸ್ ಠಾಣೆಯಿದೆ. ನಾಲ್ಕು ಗ್ರಾಮಗಳಲ್ಲಿ ಕಲ್ಲು ಕುಟುಕರು 700 ಕುಟುಂಬಸ್ಥರು 1974 ರಿಂದ ಕಲ್ಲು ತೆಗೆದು ಜೀವನ ಮಾಡುತ್ತಿದ್ದಾರೆ. ಸ್ಥಳೀಯರು ಬಂದು ನನಗೆ ದೂರು ಕೊಟ್ಟಿದ್ದಾರೆ. ಕೈಗಾರಿಕೆ ಸಚಿವರಿಗೆ ದೂರು ಕೊಟ್ಟ ನಂತರ, ಪ್ರಭ ಅರ್ಥ್ ಮೂವರ್ಸ್, ಮತ್ತು ಶಕ್ತಿ ಎಂಟರ್ ಪ್ರೈಸಸ್ ನ 18-22 ಗುಂಟೆ ವಜಾಗೊಳಿಸಿದ್ದಾರೆ. ಉಳಿದಿರುವ 42-05 ಗುಂಟೆ ವಜಾ ಆಗಿಲ್ಲ. ನೈಸರ್ಗಿಕ ಸಂಪತ್ತು ಲೂಟಿಯಾಗುತ್ತಿದೆ. ಕೂಡಲೇ ತನಿಖೆ ಮಾಡಿಸಿ, ಗಣಿಗಾರಿಕೆಯನ್ನು ವಜಾಗೊಳಿಸಬೇಕು. ಒಂದು ವೇಳೆ ಗಣಿಗಾರಿಕೆ ಆರಂಭಿಸಿದರೆ, 7 ಸಾವಿರ ಡೀಮ್ಡ್ಸ್ ಫಾರೆಸ್ಟ್ ಇದೆ. ರೈತರಿಗೂ ತೊಂದರೆ ಆಗುತ್ತದೆ. ಗಣಿಗಾರಿಕೆ ಮಾಡಲು ಬಂದರೆ, ದೊಡ್ಡ ಮಟ್ಟದಲ್ಲಿ ಗಲಾಟೆಯಾಗುತ್ತದೆ. ಇದಕ್ಕೆ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ ಎಂದರು.
ಅನುದಾನಗಳಲ್ಲಿ ತಾರತಮ್ಯ:
ನಮ್ಮ ಕ್ಷೇತ್ರಕ್ಕೆ ತಾರತಮ್ಯ ಮಾಡದೆ ಅನುದಾನ ಕೊಡಿ, ಇಲ್ಲವೇ, ನಿಮಗೆ ಅನುದಾನ ಕೊಡುವುದಿಲ್ಲ ಎಂದು ಬೋರ್ಡ್ ಹಾಕಿ, ನಾನು ಈ ಸದನಕ್ಕೆ ಬರುವುದಿಲ್ಲ. ಕ್ಷೇತ್ರದಲ್ಲೆ ಇದ್ದು, ಜನರಿಂದ ಬೈಸಿಕೊಂಡೇ ಇರ್ತೇನೆ ಎಂದು ಬೇಸರ ಹೊರಹಾಕಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷ 3 ತಿಂಗಳು ಕಳೆದರೂ, ನಮ್ಮ ಕ್ಷೇತ್ರಕ್ಕೆ ಅನುದಾನ ಸಿಕ್ಕಿಲ್ಲ. ತಾರತಮ್ಯವಾಗುತ್ತಿದೆ. 40 ಸಾವಿರ ಅಲ್ಪಸಂಖ್ಯಾತರಿದ್ದಾರೆ. ಎಸ್.ಸಿ.ಎಸ್ಟಿ 65 ಸಾವಿರ, 2023-24 ನೇ ಸಾಲಿನಲ್ಲಿ ಲೋಕೋಪಯೋಗಿ ಇಲಾಖೆಯಿಂದ ಎಸ್.ಎಚ್.ಡಿ.ಬಿ. ಯೋಜನೆಯಡಿ 10 ಕೋಟಿ ಕೊಟ್ಟಿದ್ದಾರೆ. ಕಾಂಗ್ರೆಸ್ ಶಾಸಕರಿರುವ ಕ್ಷೇತ್ರಗಳಿಗೆ 25 ಕೋಟಿ ಕೊಟ್ಟಿದ್ದಾರೆ. 2024-25 ನೇ ಸಾಲಿನಲ್ಲಿ ಎಂ.ಡಿ.ಆರ್.3034 ರಲ್ಲಿ 8 ಕೋಟಿ ಕೊಟ್ಟಿದ್ದಾರೆ. ಕಾಂಗ್ರೆಸ್ ಶಾಸಕರಿಗೆ 15-20 ಕೋಟಿ ಕೊಟ್ಟಿದ್ದಾರೆ.
ನಮ್ಮ ವಿಧಾನಸಭಾ ಕ್ಷೇತ್ರವು, ಹಿಂದುಳಿದ ತಾಲ್ಲೂಕಾಗಿದೆ. 100 ಹಾಸಿಗೆಗಳ ಆಸ್ಪತ್ರೆಯಿಲ್ಲ, 11 ಸಾವಿರ ಮಕ್ಕಳು ನಗರ ವ್ಯಾಪ್ತಿಯಲ್ಲಿ ಓದುತ್ತಿದ್ದಾರೆ. ಸುಸಜ್ಜಿತ ಗ್ರಂಥಾಲಯವಿಲ್ಲ. ನಮ್ಮ ಕ್ಷೇತ್ರಕ್ಕೆ ಅನುದಾನ ಕೊಡಬೇಕು. ಈ ಹಿಂದೆ ಯಾವ ಮುಖ್ಯಮಂತ್ರಿಗಳು ಹೀಗೆ ಮಾಡಿರಲಿಲ್ಲ. ಕಾಂಗ್ರೆಸ್ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
For Daily Updates WhatsApp ‘HI’ to 7406303366









