Sidlaghatta : ಹಲವಾರು ತಿಂಗಳುಗಳಿಂದ ಬಾಕಿ ಉಳಿಸಿಕೊಂಡಿರುವ ಲಕ್ಷಾಂತರ ಹಣವನ್ನು ವಸೂಲಿ ಮಾಡಲು ಮಂಗಳವಾರ ನಗರಸಭೆ ಅಧಿಕಾರಿಗಳು ಪೊಲೀಸರೊಂದಿಗೆ ತೆರಳಿ ಮೊಬೈಲ್ ಟವರ್ ಗಳ ಫ್ಯೂಸ್ ತೆಗೆದರು.
ಈ ಸಂದರ್ಭದಲ್ಲಿ ಮಾತನಾಡಿದ ಪೌರಾಯುಕ್ತೆ ಅಮೃತ, “ನಗರಸಭೆ ವ್ಯಾಪ್ತಿಯಲ್ಲಿರುವ 18 ಮೊಬೈಲ್ ಟವರ್ ಗಳಿಂದ ಸುಮಾರು 20 ಲಕ್ಷ ರೂಗಳಷ್ಟು ಸೇವಾ ಶುಲ್ಕ ಬರಬೇಕಿದ್ದು, ಸುಮಾರು ಆರು ತಿಂಗಳುಗಳಿಂದ ನೋಟೀಸ್ ನೀಡಲಾಗಿತ್ತು. ಫೋನ್ ಮಾಡಿದಾಗ ಉದಾಸೀನವಾಗಿ ಮಾತನಾಡುತ್ತಿದ್ದರು. ಬಾಕಿ ಪಾವತಿಸಿದೆ ನಿರ್ಲಕ್ಷ ವಹಿಸಿದ್ದರಿಂದ ನಗರಸಭೆ ಆದಾಯ ಕುಂಠಿತಗೊಂಡಿದೆ. ಹಾಗಾಗಿ ಈ ದಿನ ನಾವು ಅಧಿಕಾರಿಗಳೊಂದಿಗೆ ಬಂದು ಮೊಬೈಲ್ ಟವರ್ ಗಳ ಫ್ಯೂಸ್ ಗಳನ್ನು ತೆಗೆದಿದ್ದೇವೆ. ಈಗಲಾದರೂ ಅವರು ಬಂದು ಬಾಕಿ ಹಣ ಪಾವತಿಸುತ್ತಾರೆ ಎಂದು ಆಶಿಸುತ್ತೇನೆ” ಎಂದು ಹೇಳಿದರು.
ನಗರಸಭೆಯ ಹಲವು ಪ್ರದೇಶದಲ್ಲಿ ವಿವಿಧ ಕಂಪನಿಗಳ ಸುಮಾರು 18 ಮೊಬೈಲ್ ಟವರ್ ಗಳನ್ನು ಅಳವಡಿಸಲಾಗಿದೆ. ಕೇವಲ ಒಂದನ್ನು ಹೊರತುಪಡಿಸಿದರೆ, ಉಳಿದ ಕಂಪೆನಿಗಳು ಸುಮಾರು ವರ್ಷಗಳಿಂದ ಸೇವಾ ಶುಲ್ಕವನ್ನು ಬಾಕಿ ಉಳಿಸಿಕೊಂಡಿವೆ. ಅದನ್ನು ಪಾವತಿಸಲು ಜನವರಿಯಲ್ಲಿ ನೋಟಿಸ್ ನೀಡಿದ್ದರೂ ಸಹ ಇದುವರೆಗೂ ಹಣ ಪಾವತಿಸಿಲ್ಲ. ಇದೀಗ ನಗರಸಭೆಗೆ ಹಣ ನಿರ್ಲಕ್ಷ ವಹಿಸಿರುವ ಮೊಬೈಲ್ ಟವರ್ ಗಳ ಫ್ಯೂಸ್ ಗಳನ್ನು ಕಿತ್ತುಹಾಕುವ ಕೆಲಸಕ್ಕೆ ನಗರಸಭೆಯ ಅಧಿಕಾರಿಗಳು ಮುಂದಾಗಿದ್ದಾರೆ.
ಮೆಹಬೂಬ ನಗರದಲ್ಲಿ ಅಳವಡಿಸಿರುವ ಮೊಬೈಲ್ ಟವರ್ ಗಳಿಂದ ಫ್ಯೂಸ್ ಕಿತ್ತಾಕಿದ ಬಳಿಕ ಮೊಬೈಲ್ ಕಂಪನಿಯ ಟೆಕ್ನಿಶಿಯನ್ ಪುನಃ ಫೀಸ್ ಹಾಕಿದ್ದರಿಂದ ಕುಪಿತಗೊಂಡ ನಗರಸಭೆಯ ಪೌರಾಯುಕ್ತೆ ಅಮೃತ ಮತ್ತು ಸಿಬ್ಬಂದಿ ಟೆಕ್ನಿಷಿಯನ್ ಅನ್ನು ತರಾಟೆಗೆ ತೆಗೆದುಕೊಂಡರು.
ಟವರ್ ಗಳಿಗೆ ಅಳವಡಿಸಿರುವ ಫ್ಯೂಸುಗಳನ್ನು ತೆಗೆಯಲು ತಾಂತ್ರಿಕ ನೈಪುಣ್ಯತೆ ಹೊಂದಿರಬೇಕು ಎಂದು ಖಾಸಗಿ ಕಂಪನಿಯ ಟೆಕ್ನಿಷಿಯನ್ ನಗರಸಭೆಯ ಸಿಬ್ಬಂದಿ ಮತ್ತು ಅಧಿಕಾರಿಗಳ ಕಾರ್ಯವೈಖರಿಯನ್ನು ಪ್ರಶ್ನಿಸುವ ರೀತಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದ. ಇದರಿಂದ ಕೆರಳಿದ ನಗರಸಭೆಯ ಪೌರಾಯುಕ್ತೆ ಅಮೃತ ಮತ್ತು ನಗರ ಪೊಲೀಸ್ ಠಾಣೆ ಪಿ.ಎಸ್.ಐ ವೇಣುಗೋಪಾಲ್, ಇಂಡಸ್ ಕಂಪನಿಯ ಟೆಕ್ನಿಷಿಯನ್ ನನ್ನು ತರಾಟೆಗೆ ತೆಗೆದುಕೊಂಡರು. ಜನವರಿ ತಿಂಗಳಿಂದ ನೋಟಿಸ್ ಕೊಟ್ಟರು ಯಾಕೆ ಬಾಕಿ ಪಾವತಿಸಿಲ್ಲ ಎಂದು ಪ್ರಶ್ನಿಸಿದರು. ನಿಮ್ಮ ಕಂಪನಿಯವರು ಬಾಕಿ ಪಾವತಿಸಿದ ಕಾರಣ ನಗರಸಭೆಯಲ್ಲಿರುವ ತಾಂತ್ರಿಕ ನಿಪುಣರಿಂದ ಫ್ಯೂಸುಗಳನ್ನು ತೆಗೆದಿದ್ದೇವೆ. ಮೊದಲು ಬಾಕಿ ಪಾವತಿಸಿ ಆನಂತರ ಮಾತನಾಡಿ ಎಂದರು.
ಆಗ ಟೆಕ್ನಿಷಿಯನ್ ನನಗೆ ಯಾವುದೇ ರೀತಿಯ ನೋಟೀಸ್ ಬಂದಿಲ್ಲ ಎಂದು ಹೇಳಿದ್ದಲ್ಲದೆ, ನಮ್ಮ ಕಂಪನಿಯ ಮುಖ್ಯಸ್ಥರೊಂದಿಗೆ ಮಾತನಾಡಿ ಎಂದು ಜಾರಿಕೊಳ್ಳುವ ಪ್ರಯತ್ನ ಮಾಡಿದರು.
ಎಲೆವರ್ ಡಿಜಿಟಲ್ ಇನ್ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್ ಅವರು ಮಾತ್ರ 4 ಮೊಬೈಲ್ ಟವರ್ ಗಳಿಗೆ ಸಂಬಂಧಿಸಿದಂತೆ ನಾಲ್ಕು ಲಕ್ಷ 32 ಸಾವಿರಗಳನ್ನು ಮಾತ್ರ ಪಾವತಿ ಮಾಡಿದರು. ಇನ್ನುಳಿದಂತೆ ಹಲವರು ಮೊಬೈಲ್ ಟವರ್ ಗಳ ಬಾಕಿ ಉಳಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆಯ ಕಂದಾಯ ನಿರೀಕ್ಷಕ ಅತೀಕ್, ಸಂಜೀವ್ ಕುಮಾರ್, ಕಂದಾಯ ಅಧಿಕಾರಿ ನಾಗರಾಜ್, ಕರ ವಸೂಲಿಗಾರ ಅಪ್ಪಿ, ಶ್ರೀನಿವಾಸ್, ಅಮರ್ ಹಾಜರಿದ್ದರು.