Sidlaghatta : ಶಿಡ್ಲಘಟ್ಟ ನಗರಸಭೆಗೆ (City Municipal Council) ವರ್ಷಗಟ್ಟಲೆ ಬಾಡಿಗೆ ಬಾಕಿ ಉಳಿಸಿಕೊಂಡಿರುವ ಅಂಗಡಿ ಮಳಿಗೆಗಳ ವಿರುದ್ಧ ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಜಿ. ಅಮೃತ ಅವರು ಗುಡುಗಿದ್ದು, ಬಾಡಿಗೆ ಕಟ್ಟದ ನಾಲ್ಕೈದು ಅಂಗಡಿಗಳಿಗೆ ಸ್ಥಳದಲ್ಲೇ ಬೀಗ ಜಡಿದು ಎಚ್ಚರಿಕೆ ನೀಡಿದ್ದಾರೆ.
ನಗರದ KSRTC ಬಸ್ ನಿಲ್ದಾಣದ ಬಳಿಯಿರುವ ಹೊಸ ಐ.ಡಿ.ಎಸ್.ಎಂ.ಟಿ.ಯ 27 ಅಂಗಡಿ ಮಳಿಗೆಗಳು ಹಾಗೂ ಸಂತೆ ಬೀದಿ ರಸ್ತೆಯಲ್ಲಿರುವ ಎರಡೂ ಕಡೆಯ ಅಂಗಡಿಗಳಿಗೆ ಭೇಟಿ ನೀಡಿದ ಪೌರಾಯುಕ್ತೆ ಮತ್ತು ಸಿಬ್ಬಂದಿ ಬಾಕಿ ಮೊತ್ತವನ್ನು ಸ್ಥಳದಲ್ಲೇ ಲೆಕ್ಕಾಚಾರ ಮಾಡಿ ಕೂಡಲೇ ಹಣ ಪಾವತಿಸುವಂತೆ ಮಾಲೀಕರಿಗೆ ಸೂಚಿಸಿದರು.
ಈ ವೇಳೆ ಕೆಲವು ಅಂಗಡಿಗಳು ವರ್ಷಗಟ್ಟಲೆ ಬಾಡಿಗೆ ಹಣ ಕಟ್ಟದಿರುವುದು ಬೆಳಕಿಗೆ ಬಂದ ಕೂಡಲೇ, ಪೌರಾಯುಕ್ತರು ನಗರಸಭೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. “ನಗರಸಭೆಗೆ ವರ್ಷಗಟ್ಟಲೆ ಕಟ್ಟಬೇಕಾದ ಹಣ ಕಟ್ಟಿಲ್ಲ ಅಂದ್ರೆ ಏನ್ರಿ ಮಾಡ್ತಿದ್ದೀರಿ?” ಎಂದು ಅಧಿಕಾರಿಗಳನ್ನು ಪ್ರಶ್ನಿಸಿ, ಬಾಕಿ ಉಳಿಸಿಕೊಂಡ ಅಂಗಡಿಗಳಿಗೆ ದಿಡೀರ್ ಬೀಗ ಹಾಕಿ ಬಂದ್ ಮಾಡುವಂತೆ ಸ್ಥಳದಲ್ಲೇ ಸೂಚಿಸಿದರು.
ಬೀಗ ಹಾಕಲು ಬೀಗಗಳು ಇಲ್ಲದೆ ಅಧಿಕಾರಿಗಳು ಪರದಾಡುತ್ತಿದ್ದಾಗ, ಪೌರಾಯುಕ್ತರೇ ಹೊಸ ಬೀಗಗಳನ್ನು ತರಲು ಹಣ ನೀಡಲು ಮುಂದಾಗಿದ್ದು ಗಮನಾರ್ಹವಾಗಿತ್ತು. ಹೆಚ್ಚು ಬಾಕಿ ಉಳಿಸಿಕೊಂಡ ಕೆಲವು ಅಂಗಡಿಗಳಿಗೆ ಬೀಗ ಹಾಕಿ, ಕಡಿಮೆ ಬಾಕಿ ಇರುವ ಅಂಗಡಿಗಳ ಗೋಡೆಗೆ ನೋಟಿಸ್ ಅಂಟಿಸಲಾಯಿತು.
ಅಂಗಡಿ ಮಾಲೀಕರಿಗೆ ಎಚ್ಚರಿಕೆ ನೀಡಿದ ಪೌರಾಯುಕ್ತೆ ಜಿ. ಅಮೃತ ಅವರು, “ನಗರಸಭೆ ಎಲ್ಲ ಸವಲತ್ತುಗಳನ್ನು ನೀಡುತ್ತದೆ. ಪ್ರತಿ ತಿಂಗಳೂ ಬಾಡಿಗೆ ಸಮಯಕ್ಕೆ ಸರಿಯಾಗಿ ಪಾವತಿಸುವುದು ನಿಮ್ಮ ಜವಾಬ್ದಾರಿ. ತಿಂಗಳುಗಟ್ಟಲೆ, ಕೆಲವರು ವರ್ಷಗಟ್ಟಲೆ ಬಾಡಿಗೆ ಬಾಕಿ ಉಳಿಸಿಕೊಂಡರೆ ಹೇಗೆ. ಇದು ತಪ್ಪು. ಇನ್ನು ಮುಂದೆ ಬಾಡಿಗೆ ಬಾಕಿ ಉಳಿಸಿಕೊಂಡರೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು. ಮುಂದೆ ಬಾಡಿಗೆಯ ಟೆಂಡರ್ ಕರೆದಾಗ ಈಗ ಬಾಕಿ ಉಳಿಸಿಕೊಂಡಿರುವವರನ್ನು ಭಾಗವಹಿಸಲು ಬಿಡುವುದಿಲ್ಲ” ಎಂದು ಕಟುವಾಗಿ ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆಯ ಕಂದಾಯ ಅಧಿಕಾರಿ ನಾಗರಾಜ, ಕಂದಾಯ ನಿರೀಕ್ಷಕರಾದ ಸಂಜೀವ್ ಕುಮಾರ್, ಮೊಹಮದ್ ಅತೀಕ್ ಉಲ್ಲಾ, ಕರ ವಸೂಲಿಗಾರರಾದ ಅಮರನಾರಾಯಣಸ್ವಾಮಿ, ಶ್ರೀನಿವಾಸ್.ಜಿ, ನಾರಾಯಣಸ್ವಾಮಿ, ಆರೋಗ್ಯ ನಿರೀಕ್ಷಕ ಕೃಷ್ಣಮೂರ್ತಿ ಹಾಗೂ ಶೇಖ್ ಆರಿಫ್ ಸೇರಿದಂತೆ ನಗರಸಭೆಯ ಸಿಬ್ಬಂದಿ ಹಾಜರಿದ್ದರು.








