Muttur, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಮುತ್ತೂರು ಗ್ರಾಮದಲ್ಲಿ ನಿರ್ಮಾಣ ಮಾಡಿರುವ, ಡಾಂಬರು ಮಿಶ್ರಣ ಮಾಡುವ ಪ್ಲಾಂಟ್ ನಿಂದ ಹೊರಬರುತ್ತಿರುವ ವಿಷಾನಿಲಸಹಿತವಾದ ಹೊಗೆಯಿಂದ ಗ್ರಾಮಸ್ಥರ ಆರೋಗ್ಯ ಹದಗೆಡುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು, ಸ್ಥಳ ಪರಿಶೀಲನೆ ನಡೆಸಿ, ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಸಿ.ಎನ್.ಹೊಸೂರು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
“ಸಿ.ಎನ್.ಹೊಸೂರು ಗ್ರಾಮದ ಗಡಿಯಲ್ಲಿ, 8 ತಿಂಗಳ ಹಿಂದೆ Hot Mix Plant (ರಸ್ತೆಗೆ ಹಾಕುವ ಡಾಂಬರು ತಯಾರಿಸುವ ಕಾರ್ಖಾನೆ) ನಿರ್ಮಾಣ ಮಾಡಿದ್ದಾರೆ. ಕಾರ್ಖಾನೆ ತೆರೆಯುವಾಗಲೇ, ನಾವು ವಿರೋಧ ವ್ಯಕ್ತಪಡಿಸಿದ್ದೇವೆ. ಘಟಕದಿಂದ ಈಶಾನ್ಯ ದಿಕ್ಕಿಗೆ 392 ಮೀಟರ್ ಅಂತರದಲ್ಲಿ ವಸತಿ ನಿವೇಶನಗಳು ಇವೆ. ಪಶ್ಚಿಮ ದಿಕ್ಕಿಗೆ 402 ಮೀಟರ್ ಅಂತರದಲ್ಲಿ, ಸಿ.ಎನ್.ಹೊಸೂರು ಗ್ರಾಮವಿರುತ್ತದೆ. 671 ಮೀಟರ್ ಅಂತರದಲ್ಲಿ ಸರ್ಕಾರಿ ಶಾಲೆ ಇದೆ. 722 ಮೀಟರ್ ಅಂತರದಲ್ಲಿ ಮುತ್ತೂರು ಗ್ರಾಮವಿದೆ, ಆದರೂ ಇದ್ಯಾವುದನ್ನೂ ಗಮನಕ್ಕೆ ತೆಗೆದುಕೊಳ್ಳದೆ, ಆರಂಭ ಮಾಡಿದ್ದಾರೆ. ಡಾಂಬರಿನ ವಾಸನೆ, ಹಾಗೂ ಧೂಳಿನಿಂದಾಗಿ ಗ್ರಾಮದಲ್ಲಿ, ಮಕ್ಕಳು, ವೃದ್ಧರು, ಮಹಿಳೆಯರು, ರೋಗಗಳಿಗೆ ಒಳಗಾಗುತ್ತಿದ್ದಾರೆ. ಯಾವುದೇ ಕ್ರಮ ಕೈಗೊಂಡಿಲ್ಲ” ಎಂದು ಕರ್ನಾಟಕ ದಲಿತ ಜನಸೇನೆ ರಾಜ್ಯಾಧ್ಯಕ್ಷ ಟಿ.ಭರತ್ ಆರೋಪಿಸಿದರು.
ಗ್ರಾಮದ ಮುಖಂಡ ಪುನೀತ್ ಮಾತನಾಡಿ, ಈ ಘಟಕದಿಂದ ಹೊರಬರುತ್ತಿರುವ ರಾಸಾಯನಿಕ ವಿಷಾನಿಲ ಸಹಿತವಾದ ಹೊಗೆಯಿಂದ, ನಮ್ಮ ಗ್ರಾಮದಲ್ಲಿನ ಜನರಿಗೆ ಕೆಮ್ಮು, ಆಸ್ತಮಾ, ಕಫ, ಮುಂತಾದ ಕಾಯಿಲೆಗಳು ಆವರಿಸಿಕೊಳ್ಳುತ್ತಿವೆ. ಡಯಾಲಿಸಿಸ್ ರೋಗಿಗಳು ಕೂಡಾ, ತುಂಬಾ ಸಂಕಷ್ಟಕ್ಕೆ ಒಳಗಾಗುತ್ತಿದ್ದರೂ, ಅಧಿಕಾರಿಗಳು ಯಾಕೆ ಕಣ್ಣು ಮುಚ್ಚಿ ಕುಳಿತಿದ್ದಾರೆಂಬುದು ಅರ್ಥವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳೀಯ ಮುಖಂಡ ವೇಣು ಮಾತನಾಡಿ, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಈ ಘಟಕಕ್ಕೆ ಹೊಂದಿಕೊಂಡಂತೆ ಕೃಷಿ ಜಮೀನುಗಳು ಇವೆ. ಘಟಕದಿಂದ ಹೊರಸೂಸುವ, ಅನಿಲ ರೂಪದ ಎಸ್.ಓಟೂ, ಎನ್.ಓ.ಎಕ್ಸ್, ಸಿಓ, ಸಿಓಟೂ, ವಿಓಸಿ ಮುಂತಾದ ಮಾಲಿನ್ಯಕಾರಗಳು ಬಿಡುಗಡೆಯಾಗುವುದರಿಂದ ಕೃಷಿ ಜಮೀನುಗಳಿಗೆ, ಗ್ರಾಮದ ನಿವಾಸಿಗಳಿಗೆ ತೊಂದರೆಯಾಗಬಹುದು, ಸದರಿ ಘಟಕದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕಚೇರಿಗೆ ಮನವರಿಕೆ ಮಾಡಿಕೊಟ್ಟಿದ್ದರೂ, ಇದುವರೆಗೂ ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.
ಸಿ.ಎನ್.ಹೊಸೂರು ಗ್ರಾಮದ ಮುಖಂಡರಾದ ವೇಣು, ಪುನೀತ್, ಮುನಿಕೃಷ್ಣಪ್ಪ, ಮಧು, ರವಿ, ರಮೇಶ್, ವೆಂಕಟೇಶ್, ಶಿವಕುಮಾರ್, ಗಜೇಂದ್ರ, ರಾಮಾಂಜಿ, ಅರವಿಂದ್ ರೆಡ್ಡಿ, ಬಾಲಕೃಷ್ಣ, ಮಹೇಶ್, ಡಿ.ಮುನಿಕೃಷ್ಣಪ್ಪ, ಮಂಜುನಾಥ್, ಹಾಜರಿದ್ದರು.
ಕಂದಾಯ ಇಲಾಖೆಗೆ ಸೇರಿದ ಜಾಗದಲ್ಲಿ ಪ್ಲಾಂಟ್ ಮಾಡಿದ್ದಾರೆ. ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದರೆ, ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿ, ಸಂಬಂಧಪಟ್ಟ ಅಧಿಕಾರಿಗಳಿಗೆ ವರದಿ ಸಲ್ಲಿಸುತ್ತೇವೆ.
- ಆರ್.ಜಿ.ಸೌಮ್ಯ. ಪಿಡಿಓ ಮಳ್ಳೂರು ಗ್ರಾ.ಪಂ.








