Home News ರಾಷ್ಟ್ರೀಯ ರೈತ ದಿನಾಚಾರಣೆ ಕಾರ್ಯಕ್ರಮ

ರಾಷ್ಟ್ರೀಯ ರೈತ ದಿನಾಚಾರಣೆ ಕಾರ್ಯಕ್ರಮ

0
Sidlaghatta National Farmers Day

Sidlaghatta : ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡಬೇಕು. ಸರ್ಕಾರದಿಂದ ಬರುವ ಎಲ್ಲಾ ಸೌಲತ್ತುಗಳನ್ನು ಜಾತಿ ಭೇದ ವಿಂಗಡಿಸದೆ ಏಕರೂಪದಲ್ಲಿ ಪ್ರತಿಯೊಬ್ಬ ರೈತರಿಗೂ ಹಂಚಿಕೆಯಾದಾಗ ಮಾತ್ರ ರಾಷ್ಟ್ರೀಯ ರೈತ ದಿನಾಚಾರಣೆಗೆ ಅರ್ಥ ಬರುತ್ತದೆ. ಈ ನಿಟ್ಟಿನಲ್ಲಿ ಸರ್ಕಾರಗಳು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಪ್ರಧಾನ ಕಾರ್ಯಧರ್ಶಿ ಭಕ್ತರಹಳ್ಳಿ ಬೈರೇಗೌಡ ತಿಳಿಸಿದರು.

ಶಿಡ್ಲಘಟ್ಟ ನಗರದ ರೇಷ್ಮೆ ಕೃಷಿ ಇಲಾಖೆ ಆವರಣದಲ್ಲಿ ಶುಕ್ರವಾರ ರೇಷ್ಮೆ ಇಲಾಖೆ ಮತ್ತು ಕೃಷಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ರೈತ ದಿನಾಚಾರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ರೈತರು ಕೃಷಿ ಮಾಡುವುದು ದುಭಾರಿಯಾಗಿದೆ. ಸರ್ಕಾರಗಳು ಯಂತ್ರೋಪಕರಣಗಳು ಮತ್ತು ಹನಿನೀರಾವರಿ ಸೌಲಭ್ಯ ಪ್ರತಿಯೊಬ್ಬ ರೈತರಿಗೂ ನೀಡಬೇಕು. ಸಮರ್ಪಕವಾಗಿ ಬೀಜ, ರಸಗೊಬ್ಬರ ಸಕಾಲದಲ್ಲಿ ವಿತರಿಸಬೇಕು. ಎಲ್ಲಾ ಇಲಾಖಾಧಿಕಾರಿಗಳು ಬೆಳೆಗಳಿಗೆ ತಗಲುವ ರೋಗ ರುಜಿನಗಳನ್ನು ತಡೆಗಟ್ಟಲು ವಿಜ್ಞಾನಿಗಳನ್ನು ಕರೆಸಿ ಸಕಾಲದಲ್ಲೆ ರೈತರಿಗೆ ಮಾಹಿತಿಗಳನ್ನು ನೀಡಬೇಕು. ಭೂಮಿಯನ್ನು ಅಕ್ಷಯ ಪಾತ್ರೆ ಎನ್ನುತ್ತಾರೆ. ಆದರೆ ರಾಸಾಯನಿಕಗಳನ್ನು ಹಾಕಿ ಭೂಮಿಯನ್ನು ಕಲುಷಿತಗೊಳಿಸಲಾಗುತ್ತಿದೆ. ಭೂಮಿಗೆ ಪೋಷಕಾಂಶಗಳನ್ನು ಸೇರಿಸಿ ಫಲವತ್ತಾದ ಭೂಮಿ ರೂಪಿಸಲು ಸರ್ಕಾರಗಳು ಉತ್ತೇಜನ ನೀಡಬೇಕು. ಎಚ್.ಎನ್.ವ್ಯಾಲಿ ಯೋಜನೆಯ ಎರಡನೇ ಹಂತಕ್ಕೆ ಮಂಜೂರು ಮಾಡಿ ಕೆಲವು ಭಾಗಗಳಿಗಾದರೂ ನೀರು ಹರಿಸಬೇಕು ಎಂದರು.

ತಾಲ್ಲೂಕು ಕೃಷಿಕ ಸಮಾಜದ ಜಿಲ್ಲಾ ನಿರ್ದೇಶಕ ಕೆಂಪೇಗೌಡ ಮಾತನಾಡಿ, ರೈತ ದೇಶದ ಬೆನ್ನೆಲಬು ಎಂದು ಹೇಳುವ ಸರ್ಕಾರಗಳಾಗಲಿ, ಜನಪ್ರತಿನಿಧಿಗಳಾಗಲಿ ಕೃಷಿಕ ರೈತರ ಮೇಲೆ ಕಾಳಜಿ ಇಲ್ಲ. ಕೃಷಿಗೆ ಸಂಬಂಧಿಸಿದಂತೆ ರಾಜ್ಯಾದ್ಯಂತ ಇಲಾಖೆಗಳಲ್ಲಿ ಸಮರ್ಪಕ ನೌಕರರನ್ನು ನೀಡದೆ ರೈತರು ಪರದಾಡುವ ಪರಿಸ್ಥಿತಿ ಇದೆ. ಸರ್ಕಾರಕ್ಕೆ ನಿಜವಾದ ಕಾಳಜಿ ಇದ್ದರೆ ಕೃಷಿ ಇಲಾಖೆಯಲ್ಲಿ ಎಲ್ಲಾ ಹಂತಗಳಲ್ಲಿ ಸಮರ್ಪಕವಾಗಿ ಕಾರ್ಯ ನಿರ್ವಹಿಸುವ ನೌಕರರನ್ನು ನೀಡಿ ರೈತರಿಗೆ ಸಮರ್ಪಕ ಮಾಹಿತಿ ಹಾಗೂ ಸೌಲಭ್ಯಗಳನ್ನು ಒದಗಿಸಬೇಕು ಎಂದರು.

ರೇಷ್ಮೆ ಇಲಾಖೆ ಎ.ಡಿ.ಎಸ್.ತಿಮ್ಮರಾಜು, ಅಟಲ್ ಭೂಜಲ್ ಅಧಿಕಾರಿ ನಾಗೇಶ್, ಪಶುಸಂಗೋಪನ ಇಲಾಖೆ ವಿಜ್ಞಾನಿ ಸತೀಶ್ ಗೌಡ, ಪಶುಸಂಗೋಪನ ಎ.ಡಿ.ಎಸ್ ಡಾ.ರಮೇಶ್ ರವರು ತಮ್ಮ ತಮ್ಮ ಇಲಾಖೆಗಳಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಹಾಗೂ ಬೆಳೆಗಳಿಗೆ ತಗಲುವ ರೋಗಗಳ ಮತ್ತು ನಿಯಂತ್ರಣದ ಬಗ್ಗೆ ರೈತರಿಗೆ ಮಾಹಿತಿ ನೀಡಿದರು.

ರೈತ ಸಂಘದ ನಗರ ಘಟಕದ ಅಧ್ಯಕ್ಷ ಬಿ.ನಾರಾಯಣಸ್ವಾಮಿ, ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬೆಳ್ಳೂಟಿ ಬಿ.ಕೆ.ಮುನಿಕೆಂಪಣ್ಣ, ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಅಧ್ಯಕ್ಷ ರವಿಪ್ರಕಾಶ್, ತಾಲ್ಲೂಕು ಕೃಷಿಕ ಸಮಾಜದ ತಾಲ್ಲೂಕು ಅಧ್ಯಕ್ಷ ವೈ-ಹುಣಸೇನಹಳ್ಳಿ ಮಂಜುನಾಥ್, ಅರುಣ್ ಕುಮಾರ್, ಮುನೇಗೌಡ, ಮುತ್ತೂರು ಕೆಂಪೇಗೌಡ, ಆರ್.ಎಫ್ ಅಧಿಕಾರಿ ನಾಗಾರ್ಜುನ, ಕೃಷಿ ಇಲಾಖೆ ಎ.ಡಿ.ಎಸ್ ವೀಣಾ, ತಜ್ಞವಿಜ್ಞಾನಿಗಳು ಹಾಜರಿದ್ದರು.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version