Sidlaghatta : ಶಿಡ್ಲಘಟ್ಟದ ನ್ಯಾಯಾಲಯದಲ್ಲಿ ಶನಿವಾರ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಆದೇಶದ ಮೇರೆಗೆ ಶಿಡ್ಲಘಟ್ಟ ತಾಲ್ಲೂಕು ಕಾನೂನು ಸೇವಾ ಸಮಿತಿ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಲೋಕ್ ಅದಾಲತ್ ನಲ್ಲಿ ಒಟ್ಟು 115 ಪ್ರಕರಣಗಳು ಇತ್ಯರ್ಥಗೊಂಡು 98 ಲಕ್ಷ 93 ಸಾವಿರ 350 ರೂ ಪಾವತಿಸಲಾಗಿದೆ.
ತಾಲ್ಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರೂ ಆದ ಹಿರಿಯ ಸಿವಿಲ್ ನ್ಯಾಯಾಧೀಶ ಯಮನಪ್ಪ ಕರೆ ಹನುಮಂತಪ್ಪ, ತಾಲ್ಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಹಾಗೂ ಪ್ರಧಾನ ಸಿವಿಲ್ ನ್ಯಾಯಾಧೀಶೆ ಜೆ.ಪೂಜಾ ಮತ್ತು ಅಪರ ಸಿವಿಲ್ ನ್ಯಾಯಾಧೀಶ ಚಂದ್ರಶೇಖರ ಅಲ್ಬೂರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಅದಾಲತ್‌ನಲ್ಲಿ ವಿವಿಧ ರೀತಿ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಬಗೆಹರಿಸಲಾಯಿತು.
ಚೆಕ್ ಪ್ರಕರಣಗಳು 17 ಇತ್ಯರ್ಥಗೊಂಡು, 49 ಲಕ್ಷ 37 ಸಾವಿರ 877 ರೂ, 33 ಸಿವಿಲ್ ಹಾಗು 63 ಕ್ರಿಮಿನಲ್ ವ್ಯಾಜ್ಯಗಳಿಂದ 49 ಲಕ್ಷ 55 ಸಾವಿರ 523 ರೂ ( 68 ಬ್ಯಾಂಕುಗಳ ವ್ಯಾಜ್ಯ ಪೂರ್ವ ಪ್ರಕರಣಗಳಿಂದ 64 ಲಕ್ಷ 11 ಸಾವಿರ 953 ರೂಗಳು) ಸೇರಿದಂತೆ ಒಟ್ಟಾರೆಯಾಗಿ 98 ಲಕ್ಷ 93 ಸಾವಿರ 350 ರೂಗಳು ಪಾವತಿಯಾದವು.
ಜೊತೆಗೆ ವಿಚ್ಛೇದನಕ್ಕಾಗಿ ಕೋರ್ಟ್ ಮೆಟ್ಟಿಲೇರಿದ್ದ ಎರಡು ಪ್ರಕರಣಗಳ ದಂಪತಿಗಳ ಮನವೊಲಿಸಿ ರಾಜಿ ಮಾಡಲಾಯಿತು.
ಸಂಧಾನಕಾರರಾಗಿ ವಕೀಲರಾದ ಜಿ.ವೆಂಕಟೇಶ್, ಸಿ.ಲಕ್ಷ್ಮಮ್ಮ, ಆರ್.ಮುನಿಶಾಮಿಗೌಡ ಹಾಜರಿದ್ದರು.
For Daily Updates WhatsApp ‘HI’ to 7406303366









