Sidlaghatta : ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ, ಭೂ ನ್ಯಾಯ ಮಂಡಳಿ, ಆಶ್ರಯ ಸಮಿತಿ ಸೇರಿದಂತೆ 16ಕ್ಕೂ ಹೆಚ್ಚು ತಾಲ್ಲೂಕು ಮಟ್ಟದ ವಿವಿಧ ಸಮಿತಿಗಳಿಗೆ ನಾಮ ನಿರ್ದೇಶಿತ ಸದಸ್ಯರನ್ನು ನೇಮಿಸುವ ವಿಚಾರವಾಗಿ ಕಾಂಗ್ರೆಸ್‌ನಲ್ಲಿನ ರಾಜೀವ್ ಗೌಡ ಮತ್ತು ಪುಟ್ಟು ಆಂಜಿನಪ್ಪ ಬಣಗಳ ಕಿತ್ತಾಟ ರಾಜ್ಯ ಕಾಂಗ್ರೆಸ್ ನ ಹೈ ಕಮಾಂಡ್ ಅಂಗಳ ತಲುಪಿದೆ.
ಮಾಜಿ ಸಚಿವ ವಿ.ಮುನಿಯಪ್ಪ ಅವರು ಶಿಫಾರಸ್ಸು ಮಾಡಿರುವ ಆಧಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಅವರು ಹಲವು ಸಮಿತಿಗಳಿಗೆ ನಾಮ ನಿರ್ದೇಶಿತ ಸದಸ್ಯರನ್ನಾಗಿ ನೇಮಿಸುವಂತೆ ಪಟ್ಟಿಗಳನ್ನು ಸಂಬಂಧಿಸಿದ ಸಚಿವರಿಗೆ ಸಲ್ಲಿಸಿ ನೇಮಕಾತಿ ಆದೇಶ ಹೊರಡಿಸಿದ್ದರು.
ಆದರೆ ಇದೀಗ ಆ ಪಟ್ಟಿಗೆ ತಡೆ ನೀಡಿ ಆದೇಶಿಸುವಂತೆ ಸರ್ಕಾರದ ಕಾರ್ಯದರ್ಶಿಗಳಿಗೆ ಕೆಪಿಸಿಸಿ ಅಧ್ಯಕ್ಷರು ಆದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಪತ್ರ ಬರೆದು ಸೂಚಿಸಿದ್ದಾರಲ್ಲದೆ ರಾಜೀವ್ ಗೌಡ ಅವರು ಶಿಫಾರಸ್ಸು ಮಾಡಿರುವ ಹೆಸರುಗಳ ಪಟ್ಟಿಯನ್ನು ಅಂತಿಮಗೊಳಿಸಿ ನೇಮಕಾತಿ ಮಾಡುವಂತೆ ಸಂಬಂಧಿಸಿದ ಸಚಿವರಿಗೆ ಪತ್ರ ಬರೆದು ಕ್ರಮವಹಿಸಲು ಕೋರಿದ್ದಾರೆ.
ಈ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್, ಮಾಜಿ ಸಚಿವ ವಿ.ಮುನಿಯಪ್ಪ ಹಾಗೂ ಪುಟ್ಟು ಆಂಜಿನಪ್ಪ ಬಣಗಳಿಗೆ ತೀವ್ರ ಮುಖ ಭಂಗವಾಗಿದೆ.
ಕ್ಷೇತ್ರದಲ್ಲಿ ಮಾಜಿ ಸಚಿವ ವಿ.ಮುನಿಯಪ್ಪ, ರಾಜೀವ್ ಗೌಡ ಹಾಗೂ ಪುಟ್ಟು ಆಂಜಿನಪ್ಪ ಬಣಗಳಿದ್ದು ವಿವಿಧ ಸಮಿತಿಗಳಿಗೆ ಸದಸ್ಯರನ್ನು ನಾಮ ನಿರ್ದೇಶನ ಮಾಡಲು ಹೆಸರುಗಳನ್ನು ಅಂತಿಮಗೊಳಿಸಲು ಈ ಮೂವರ ನಡುವೆ ಒಮ್ಮತ ಮೂಡದೆ ಇದುವರೆಗೂ ಸಾಧ್ಯವಾಗಿರಲಿಲ್ಲ.
ಪಕ್ಷದ ನಿಯಮದಂತೆ ವಿಧಾನಸಭಾ ಚುನಾವಣೆಯ ಅಭ್ಯರ್ಥಿಯಾಗಿದ್ದ ನನ್ನ ಮೂಲಕವೇ ಎಲ್ಲ ಸಮಿತಿಗಳಿಗೂ ನೇಮಕಾತಿಯ ಪಟ್ಟಿ ರವಾನೆ ಆಗಬೇಕೆಂಬುದು ರಾಜೀವ್ ಗೌಡ ಅವರ ಪಟ್ಟಾಗಿತ್ತು. ಅದರಂತೆ 16 ಸಮಿತಿಗಳಿಗೂ ಹೆಸರನ್ನು ಸೂಚಿಸಿ ಪಟ್ಟಿಯನ್ನು ಸಲ್ಲಿಸಿದ್ದರು.
ಇನ್ನೊಂದು ಕಡೆ ಪುಟ್ಟು ಆಂಜಿನಪ್ಪ ಅವರು ವಿ.ಮುನಿಯಪ್ಪ ಅವರ ಮೂಲಕ ಹೆಸರುಗಳನ್ನು ನೀಡಿ ಪಟ್ಟಿಯನ್ನು ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಲ್ಲಿಸಿದ್ದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಅವರು ರಾಜೀವ್ ಗೌಡ ಅವರು ನೀಡಿದ್ದ ಪಟ್ಟಿಯ ಬದಲಿಗೆ ವಿ.ಮುನಿಯಪ್ಪ ಅವರ ಶಿಫಾರಸ್ಸು ಪತ್ರದ ಮೂಲಕ ಪುಟ್ಟು ಆಂಜಿನಪ್ಪ ಸಲ್ಲಿಸಿದ್ದ ಕೆಲವೊಂದು ಸಮಿತಿಗಳ ಪಟ್ಟಿಗೆ ಸರ್ಕಾರದಿಂದ ಅನುಮೋದನೆ ಕೊಡಿಸಿದ್ದರು. ಇದು ರಾಜೀವ್ ಗೌಡ ಅವರಿಗೆ ಹಾಗೂ ಅವರ ಬಣದ ಆಕ್ರೋಶಕ್ಕೆ ಕಾರಣವಾಗಿದೆ. ರಾಜಕೀಯವಾಗಿ ತೀವ್ರ ಚರ್ಚೆಗೂ ವೇದಿಕೆಯಾಗಿದೆ.
ಪಕ್ಷದ ನಿಯಮದಂತೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯಾಗಿದ್ದ ರಾಜೀವ್‌ಗೌಡ ಅವರು ಶಿಫಾರಸ್ಸು ಮಾಡಿದ್ದ ಹೆಸರುಗಳ ಪಟ್ಟಿಯನ್ನು ಕೈ ಬಿಟ್ಟು ಮಾಜಿ ರಾಜಕಾರಣದಿಂದಲೆ ದೂರ ಸರಿದ ಮಾಜಿ ಸಚಿವ ವಿ.ಮುನಿಯಪ್ಪ ಅವರ ಮೂಲಕ ಪುಟ್ಟು ಆಂಜಿನಪ್ಪ ಬಣದವರು ಶಿಫಾರಸ್ಸು ಮಾಡಿದ ಪಟ್ಟಿಗೆ ಮನ್ನಣೆ ನೀಡಿದ ಸಚಿವ ಡಾ.ಎಂ.ಸಿ.ಸುಧಾಕರ್ ಕ್ರಮಕ್ಕೆ ಕಾಂಗ್ರೆಸ್ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.