Sidlaghatta : ಭಾನುವಾರ ನಗರದಲ್ಲಿ ನಡೆಯಲಿರುವ ಬೃಹತ್ ಶ್ರೀರಾಮ ಶೋಭಾಯಾತ್ರೆ ಸುಗಮವಾಗಿ ನಡೆಯಲು ಪೊಲೀಸ್ ಇಲಾಖೆ ಶನಿವಾರ ಪಥಸಂಚಲನ ನಡೆಸಿ, ಭದ್ರತಾ ವ್ಯವಸ್ಥೆ ಪರಿಶೀಲನೆ ನಡೆಸಿತು.
ನಗರದ ಪ್ರಮುಖ ರಸ್ತೆಗಳಲ್ಲಿ ಶೋಭಾಯಾತ್ರೆ ನಡೆಯಲಿರುವ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕೆಯ ಭದ್ರತಾ ಕ್ರಮಗಳನ್ನು ಜಾರಿಗೆ ತಂದಿದೆ. ಡಿವೈಎಸ್ಪಿ ಮುರಳಿಧರ್ ಮತ್ತು ಸರ್ಕಲ್ ಇನ್ಸ್ಪೆಕ್ಟರ್ ಶ್ರೀನಿವಾಸ್ ಅವರ ನೇತೃತ್ವದಲ್ಲಿ ಪಥಸಂಚಲನ ನಡೆಸಲಾಯಿತು.
ನಗರದ ಪ್ರಮುಖ ಮಾರ್ಗಗಳಲ್ಲಿ ನಡೆದ ಈ ಪಥಸಂಚಲನದಿಂದ ಸಾರ್ವಜನಿಕರಲ್ಲಿ ಭದ್ರತೆ ಹಾಗೂ ವಿಶ್ವಾಸ ಮೂಡಿಸಲು ಪೊಲೀಸರು ಯಶಸ್ವಿಯಾಗಿದ್ದಾರೆ. ಮೆರವಣಿಗೆಯ ದಿನ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಟ್ಟುನಿಟ್ಟಾಗಿ ಕಲ್ಪಿಸಲಾಗಿದ್ದು, ಯಾವುದೇ ಅವ್ಯವಸ್ಥೆ ನಡೆಯದಂತೆ ಕ್ರಮ ಕೈಗೊಳ್ಳಲಾಗಿದೆ.
ಈ ಶೋಭಾಯಾತ್ರೆಯಲ್ಲಿ ವಿವಿಧ ಸಂಘಟನೆಗಳು ಹಾಗೂ ನಾಗರಿಕರು ಪಕ್ಷಾತೀತವಾಗಿ ಭಾಗವಹಿಸಲಿದ್ದು, ಶಿಸ್ತಿನಿಂದ ಹಾಗೂ ಧಾರ್ಮಿಕ ಗೌರವದಿಂದ ಕಾರ್ಯಕ್ರಮ ನಡೆಸುವ ನಿರೀಕ್ಷೆಯಿದೆ. ಶೋಭಾಯಾತ್ರೆಯ ವೇಳೆ ಶಾಂತಿ ಮತ್ತು ಸೌಹಾರ್ದತೆ ಕಾಪಾಡಲು ಸಾರ್ವಜನಿಕರು ಪೊಲೀಸರಿಗೆ ಸಹಕಾರ ನೀಡಬೇಕೆಂದು ಅಧಿಕಾರಿಗಳು ಮನವಿ ಮಾಡಿದರು.