
Poolakuntlahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಗಂಜಿಗುಂಟೆ ಪಂಚಾಯಿತಿಯ ಪೂಲಕುಂಟ್ಲಹಳ್ಳಿಯಲ್ಲಿ ಗ್ರಾಮಸ್ಥರು ಶುಕ್ರವಾರ ತಂಬಿಟ್ಟು ದೀಪೋತ್ಸವದ ಮೆರವಣಿಗೆಯನ್ನು ಮಾಡಿ, ಗ್ರಾಮದ ಲಕ್ಷ್ಮೀನರಸಿಂಹಸ್ವಾಮಿ ಹಾಗೂ ಅಭಯಾಂಜನೇಯಸ್ವಾಮಿ ದೇವಾಲಯಗಳಿಗೆ ತೆರಳಿ ದೀಪಗಳನ್ನು ಬೆಳಗಿದರು.
ಬೆಳಗ್ಗೆ ದೇವರುಗಳಿಗೆ ಪಂಚಾಮೃತಾಭಿಷೇಕ, ವಿವಿಧ ಹೂಗಳ ಅಲಂಕಾರ ಮಾಡಲಾಗಿತ್ತು.
ಅಕ್ಕಿ ಹಿಟ್ಟು ಮತ್ತು ಬೆಲ್ಲದಿಂದ ತಯಾರಿಸಿದ “ತಂಬಿಟ್ಟು” ಪ್ರಸಾದದ ಉಂಡೆಗಳನ್ನು ಮಾಡಿ, ಅವುಗಳ ಮಧ್ಯದಲ್ಲಿ ಗುಂಡಿಯನ್ನು ಮಾಡಿ ತುಪ್ಪದ ದೀಪವನ್ನು ಹಚ್ಚಲಾಗುತ್ತದೆ. ಗ್ರಾಮ ದೇವರುಗಳಿಗೆ ಭಕ್ತಿಯಿಂದ ತಂಬಿಟ್ಟು ದೀಪಗಳನ್ನು ಸಮರ್ಪಿಸುವುದರಿಂದ ಗ್ರಾಮಕ್ಕೆ ಸುಖ, ಶಾಂತಿ ಮತ್ತು ಸಮೃದ್ಧಿ ಸಿಗುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಮಹಿಳೆಯರು ಈ ತಂಬಿಟ್ಟು ದೀಪಗಳನ್ನು ತಟ್ಟೆಯಲ್ಲಿ ಇಟ್ಟುಕೊಂಡು ಅಥವಾ ತಲೆಯ ಮೇಲೆ ಹೊತ್ತು ಮೆರವಣಿಗೆಯಲ್ಲಿ ಸಾಗಿದರು.
“ನಮ್ಮ ಗ್ರಾಮದಲ್ಲಿ ಕಳೆದ ಎರಡು ವರ್ಷಗಳಿಂದ ಅತ್ಯಂತ ಶ್ರದ್ಧಾಭಕ್ತಿಯಿಂದ ತಂಬಿಟ್ಟು ದೀಪೋತ್ಸವವನ್ನು ಆಚರಿಸುತ್ತಿದ್ದೇವೆ. ಗ್ರಾಮದ ಮಹಿಳೆಯರು ಮೊದಲು ಗ್ರಾಮದ ಲಕ್ಷ್ಮೀನರಸಿಂಹಸ್ವಾಮಿಗೆ ಪೂಜೆ ಸಲ್ಲಿಸಿ, ನಂತರ ಗ್ರಾಮದ ಬಸ್ ನಿಲ್ದಾಣದ ಬಳಿಯ ಅಭಯಾಂಜನೇಯಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸುವುದು ವಾಡಿಕೆ. ಪೂಜೆಯ ನಂತರ ಹೆಸರುಬೇಳೆ ಪಾನಕ ವಿತರಿಸಲಾಗುತ್ತದೆ. ಅನ್ನಸಂತರ್ಪಣೆ ಕೂಡ ಆಯೋಜಿಸಿರುತ್ತೇವೆ. ಗ್ರಾಮಸ್ಥರಲ್ಲದೆ, ಮುಖ್ಯ ರಸ್ತೆಯಲ್ಲಿ ಪ್ರಯಾಣಿಸುವವರಿಗೂ ಪ್ರಸಾದ, ಹೆಸರುಬೇಳೆ ಪಾನಕ ವಿತರಿಸಲಾಗುತ್ತದೆ” ಎಂದು ಗ್ರಾಮದ ಮುಖಂಡ ಪೂಲಕುಂಟ್ಲಹಳ್ಳಿ ರಘುನಾಥರೆಡ್ಡಿ ತಿಳಿಸಿದರು.