Sidlaghatta : ಕ್ರೀಡೆ, ದೇಹ ಮತ್ತು ಮನಸ್ಸುಗಳ ನಡುವೆ ಸಮನ್ವಯ ಸಾಧಿಸುವ ಅತ್ಯುತ್ತಮ ಸಾಧನ. ಯುವಜನತೆ ಮೊಬೈಲ್ ಗಳನ್ನು ಬಿಟ್ಟುಆಟದ ಮೈದಾನಕ್ಕೆ ಇಳಿಯಬೇಕು ಎಂದು ಡಾಲ್ಫಿನ್ಸ್ ಸಮೂಹ ವಿದ್ಯಾ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಎನ್.ಅಶೋಕ್ ತಿಳಿಸಿದರು.
ನಗರದ ಡಾಲ್ಫಿನ್ಸ್ ಪದವಿ ಪೂರ್ವ ಕಾಲೇಜಿನ ಆಟದ ಮೈದಾನದಲ್ಲಿ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಮತ್ತು ಶಿಡ್ಲಘಟ್ಟ ತಾಲ್ಲೂಕು ಪದವಿ ಪೂರ್ವ ಕಾಲೇಜುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ 2025-26 ನೇ ಸಾಲಿನ ಕ್ರೀಡಾ ಚಟುವಟಿಕೆಗಳ ಮೂರನೇ ದಿನದ ಗುಂಪು ಕ್ರೀಡೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪಠ್ಯದ ಜೊತೆ ಜೊತೆಗೆ ಕ್ರೀಡೆಗಳಿಗೂ ಹೆಚ್ಚಿನ ಮಹತ್ವ ನೀಡಬೇಕಿದೆ. ನಮ್ಮ ತಾಲ್ಲೂಕಿನ ಕ್ರೀಡಾ ಪಟುಗಳು ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿರುವುದು ಈ ತಾಲೂಕಿನ ಹೆಮ್ಮೆ.ಕ್ರೀಡೆ ಮತ್ತು ಪಠ್ಯ ಚಟುವಟಿಕೆಗಳೆರಡಕ್ಕೂ ಡಾಲ್ಫಿನ್ಸ್ ಸಂಸ್ಥೆ ಯಾವತ್ತಗೂ ಪ್ರಾಮುಖ್ಯತೆ ನೀಡುತ್ತದೆ ಎಂದರು.
ಡಾಲ್ಪಿನ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎನ್.ಶ್ರೀನಿವಾಸಮೂರ್ತಿ ಮಾತನಾಡಿ, ವಿದ್ಯಾರ್ಥಿಗಳು ದೊಡ್ಡ ಮಟ್ಟದ ಕನಸುಗಳನ್ನು ಕಟ್ಟಿಕೊಂಡು ನಿತ್ಯ ತರಬೇತಿ ಪಡೆಯಬೇಕು. ಒಂದು ದಿನ ಅಥವಾ ಒಂದು ಆವರ್ತದ ಕ್ರೀಡೆಗಳಿಗೆ ಮಾತ್ರವೇ ಸೀಮಿತಗೊಳ್ಳದೆ ಇಷ್ಟದ ಕ್ರೀಡೆಗಳಲ್ಲಿ ಬದುಕು ರೂಪಿಸಿಕೊಳ್ಳುವ ಮಟ್ಟಿಗೆ ನಿರಂತರ ತರಬೇತಿ ಪಡೆಯಬೇಕು. ಒಮ್ಮೆ ಸೋತ ಮಾತ್ರಕ್ಕೆ ಅದು ವ್ಯಕ್ತಿಯ ಸೋಲಾಗಿರುವುದಿಲ್ಲ. ಕೇವಲ ಪ್ರದರ್ಶನ ನಿರೀಕ್ಷಿತ ಮಟ್ಟಕ್ಕೆಇರಲಿಲ್ಲ ಎಂದರ್ಥ. ಸೋಲನ್ನು ಮರೆತು ಗೆಲುವಿನೆಡೆಗಿನ ತುಡಿತವನ್ನು ಮತ್ತಷ್ಟು ಹೆಚ್ಚಿಸಿಕೊಂಡು ಅಭ್ಯಾಸಕ್ಕಿಳಿಯಬೇಕು. ಸೋಲು ಹೃದಯ ತಟ್ಟಲು ಬಿಡದಂತೆ ಹಾಗೂ ಗೆಲುವು ತಲೆಗೆ ಹತ್ತದಂತೆ ಕ್ರೀಡಾಪಟುಗಳು ನೋಡಿಕೊಳ್ಳಬೇಕು ಎಂದರು.
ಸರ್ಕಾರಿ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲ ಸಿ. ವೆಂಕಟ ಶಿವಾರೆಡ್ಡಿ ಮಾತನಾಡಿ, ಆಟಗಾರರು ದುರಭ್ಯಾಸಗಳನ್ನು ರೂಢಿಸಿಕೊಳ್ಳಬಾರದು. ಕೆಟ್ಟ ಚಟಗಳಿಗೆ ದಾಸರಾದರೆ ಆಟಗಾರ ಅಲ್ಲಿಗೆ ನಿಷ್ಕ್ರಿಯಗೊಂಡಂತೆಯೇ ಸರಿ. ಶಿಸ್ತು, ಸಮಯ ಪಾಲನೆ, ನಿರಂತರ ಅಭ್ಯಾಸ, ಅಹಂಕಾರ ರಹಿತ ಜೀವನ ವಿಧಾನ ಒಳ್ಳೆಯ ಆಟಗಾರನನ್ನು ರೂಪಿಸುತ್ತವೆಎಂದರು.
ಕ್ರೀಡಾಕೂಟದ ಅಂತಿಮ ದಿನದಂದು ಬಾಲಕ ಮತ್ತು ಬಾಲಕಿಯರಿಗೆ ವಾಲಿಬಾಲ್, ಹ್ಯಾಂಡ್ ಬಾಲ್ ಮತ್ತು ಶಟಲ್ ಬ್ಯಾಟ್‌ಮಿಂಟನ್ ಕ್ರೀಡೆಗಳನ್ನು ಆಯೋಜಿಸಲಾಗಿತ್ತು.ತಾಲ್ಲೂಕಿನ ಎಲ್ಲಾ ಪದವಿ ಪೂರ್ವ ಕಾಲೇಜುಗಳಿಂದ ಕ್ರೀಡಾರ್ಥಿಗಳು ಭಾಗವಹಿಸಿದ್ದರು.ವಿವಿಧ ಕಾಲೇಜುಗಳ ಪ್ರಾಂಶುಪಾಲರುಗಳು, ಕ್ರೀಡಾ ತಂಡಗಳ ನಿರ್ದೇಶಕರುಗಳು ಹಾಜರಿದ್ದರು.