Sidlaghatta : ಶಿಡ್ಲಘಟ್ಟ ತಾಲ್ಲೂಕು ಶ್ರೀರಾಮ ಶೋಭಾಯಾತ್ರೆ ಆಚರಣಾ ಟ್ರಸ್ಟ್ ನಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಶ್ರೀರಾಮಾಯಣ, ಮಹಾಭಾರತ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಕುರಿತು ರಸಪ್ರಶ್ನೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಟ್ರಸ್ಟ್ ನ ಅಧ್ಯಕ್ಷ ವೆಂಕಟೇಶ್ ತಿಳಿಸಿದರು.
ತಾಲ್ಲೂಕಿನ ಹಂಡಿಗನಾಳದ ಕೆ.ವಿ.ಭವನದಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಈ ತಿಂಗಳ 12 ನೇ ತಾರೀಕು ಮಂಗಳವಾರ ಹಂಡಿಗನಾಳದ ಕೆವಿ ಭವನದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಶಿಡ್ಲಘಟ್ಟ ತಾಲ್ಲೂಕಿನ ಎಲ್ಲ ಸರ್ಕರಿ, ಅನುದಾನಿತ ಹಾಗೂ ಖಾಸಗಿ ಪ್ರೌಢಶಾಲೆಗಳಿಂದಲೂ ತಲಾ ಇಬ್ಬರು ವಿದ್ಯಾರ್ಥಿಗಳು ಭಾಗವಹಿಸಲು ಅವಕಾಶವಿದ್ದು ಅಂತಿಮವಾಗಿ ಮೊದಲ ಸ್ಥಾನ ಪಡೆದವರಿಗೆ 50 ಸಾವಿರ ನಗದು, 2 ನೇ ಸ್ಥಾನ ಪಡೆದವರಿಗೆ 30 ಸಾವಿರ ಹಾಗೂ ತೃತೀಯ ಸ್ಥಾನ ಪಡೆದವರಿಗೆ 20 ಸಾವಿರ ರೂ ನಗದು ಬಹುಮಾನ ನೀಡಲಾಗುವುದು ಎಂದರು.
ಭಾಗವಹಿಸುವ ಎಲ್ಲ ವಿದ್ಯಾರ್ಥಿಗಳು, ಶಾಲೆಗಳಿಗೂ ಸಮಾಧಾನಕರ ಬಹುಮಾನವನ್ನು ನೀಡಲಾಗುವುದು. ನಮ್ಮ ಮಕ್ಕಳಲ್ಲಿ ನಮ್ಮ ಧರ್ಮ, ಸಂಸ್ಕೃತಿ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಅರಿವು ಮೂಡಿಸುವ ಕಾರಣಕ್ಕೆ ಈ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದು ಅವರು ವಿವರಿಸಿದರು.
ಶ್ರೀರಾಮ ಶೋಭಾಯಾತ್ರೆ ಆಚರಣಾ ಟ್ರಸ್ಟ್ ನ ಗೌರವಧ್ಯಕ್ಷ ಪ್ರಕಾಶ್, ಉಪಾಧ್ಯಕ್ಷ ಅಜಿತ್, ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್, ರವಿಚಂದ್ರ, ನಾಗೇಶ್, ಕಿರಣ್, ರಾಮಾಂಜನೇಯ, ನಾಗೇಶ್, ಲಕ್ಷ್ಮೀಕಾಂತ್, ಅನಿಲ್ ಕುಮಾರ್, ಲಕ್ಷ್ಮೀಪತಿ ಹಾಜರಿದ್ದರು.







