Sidlaghatta : ಇತ್ತೀಚಿನ ಉತ್ತಮ ಮಳೆಯಿಂದ ಶಿಡ್ಲಘಟ್ಟ ತಾಲ್ಲೂಕಿನ ಹಳೇಹಳ್ಳಿ ಕೆರೆ ಮತ್ತೆ ಜೀವಂತವಾಗಿ ಹರಿಯುತ್ತಿದೆ. ಆರು ವರ್ಷಗಳ ಬಳಿಕ ಹಳೇಹಳ್ಳಿ ಕೆರೆ ಕೋಡಿ ಹರಿಯುತ್ತಿರುವುದು ಗ್ರಾಮಸ್ಥರಲ್ಲಿ ಆನಂದ ಮೂಡಿಸಿದೆ.
ತಲಕಾಯಲಬೆಟ್ಟದ ಹಿಂಭಾಗದಲ್ಲಿ ಸುರಿದ ಮಳೆಯ ನೀರು ಕರಿಯಪ್ಪನಹಳ್ಳಿ ಕೆರೆಗೆ ಸೇರುತ್ತದೆ. ಅದು ತುಂಬಿದ ಬಳಿಕ ಹಳೇಹಳ್ಳಿ ಕೆರೆಗೆ ಹರಿದು ಬರುತ್ತದೆ. ಅಲ್ಲಿಂದ ನೀರು ಶೆಟ್ಟಿಕೆರೆ, ಚೇಳೂರು ಮಾರ್ಗವಾಗಿ ಕಂದುಕೂರು ಕೆರೆ ಕಡೆಗೆ ಹರಿಯುತ್ತದೆ. ಈ ಪ್ರಕೃತಿಯ ನದಿ-ಕೆರೆ ಸರಪಳಿ ಇದೀಗ ಮಳೆ ನೀರಿನಿಂದ ತುಂಬಿ ಹರಿಯುತ್ತಿರುವುದು ದೃಶ್ಯವೈಭವವನ್ನೇ ತಂದಿದೆ.
ಹಳೇಹಳ್ಳಿಯ ರೈತ ಎಚ್.ಬಿ. ಕೃಷ್ಣಾ ರೆಡ್ಡಿ ಮಾತನಾಡಿ,
“ಆರು ವರ್ಷಗಳ ಹಿಂದೆ ಕೆರೆ ತುಂಬಿ ಹರಿದಿತ್ತು. ಇದೀಗ ಮತ್ತೆ ಕೋಡಿ ಹರಿದಿರುವುದು ನಮ್ಮೆಲ್ಲರಿಗೂ ಸಂತಸದ ವಿಷಯ. ಆದರೆ ಕೆರೆಯೊಳಗಿನ ಜಾಲಿ ಮರಗಳನ್ನು ತೆರವುಗೊಳಿಸಿ, ಹೂಳೆತ್ತಿದರೆ ಹೆಚ್ಚು ನೀರು ಹಿಡಿಯುತ್ತದೆ. ಇದರಿಂದ ಬೇಸಿಗೆಯಲ್ಲಿ ಪಶು ಮೇಯಿಸಲು ಸಹ ಸಹಾಯಕವಾಗುತ್ತದೆ,” ಎಂದು ತಿಳಿಸಿದರು.
ಸ್ಥಳೀಯರು ಈಗಾಗಲೇ ಕೆರೆಯ ಸಂರಕ್ಷಣೆ ಮತ್ತು ಹೂಳೆತ್ತುವ ಕಾರ್ಯಕ್ಕಾಗಿ ಗ್ರಾಮ ಪಂಚಾಯಿತಿ ಹಾಗೂ ಅಧಿಕಾರಿಗಳ ಗಮನ ಸೆಳೆಯಲು ಮನವಿ ಸಲ್ಲಿಸಿದ್ದಾರೆ.







