Home News ರಾಜಕಾಲುವೆ ಆಸುಪಾಸು ಕಲ್ಲು ಚಪ್ಪಡಿ ಮೋರಿ ತೆರವಿಗೆ ಸ್ಥಳೀಯರಿಂದ ಅಡ್ಡಿ

ರಾಜಕಾಲುವೆ ಆಸುಪಾಸು ಕಲ್ಲು ಚಪ್ಪಡಿ ಮೋರಿ ತೆರವಿಗೆ ಸ್ಥಳೀಯರಿಂದ ಅಡ್ಡಿ

0
Sidlaghatta Rajakaluve expansion protest

Sidlaghatta : ಶಿಡ್ಲಘಟ್ಟ ನಗರದ ಟೋಲ್‌ ಗೇಟ್ ಬಳಿ ಹಾದು ಹೋಗಿರುವ ರಾಜಕಾಲುವೆಗೆ ಸಿಮೆಂಟ್ ತಡೆಗೋಡೆ ನಿರ್ಮಿಸುವುದಕ್ಕಾಗಿ ಕಾಲುವೆಯಲ್ಲಿನ ಹೂಳೆ ತ್ಯಾಜ್ಯ ತೆಗೆದು ಕಾಲುವೆ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು ರಾಜಕಾಲುವೆ ಆಸು ಪಾಸು ವಾಸಿಗಳು ಸಂಚರಿಸಲು ಅನುಕೂಲ ಆಗುವಂತೆ ಮೋರಿ ನಿರ್ಮಿಸಿಕೊಡಲು ಸ್ಥಳೀಯರು ಆಗ್ರಹಿಸಿದರು.

ಟೋಲ್‌ ಗೇಟ್ ಬಳಿ ರಾಜಕಾಲುವೆಯ ಒಂದು ಬದಿ ಎಂಟತ್ತು ಮನೆಗಳಿದ್ದು ಅಲ್ಲಿರುವ ಕಲ್ಲು ಚಪ್ಪಡಿಗಳಿಂದ ನಿರ್ಮಿಸಿದ್ದ ಮೋರಿಯ ಮೇಲೆ ಅಲ್ಲಿನವರು ಓಡಾಡುತ್ತಿದ್ದರು. ಆದರೆ ರಾಜಕಾಲುವೆ ಅಗಲೀಕರಣ ಮತ್ತು ಹೂಳು ಮಣ್ಣು ತೆಗೆಯುವಾಗ ಅದನ್ನು ತೆಗೆದು ಹಾಕಲಾಗುತ್ತದೆ ಎನ್ನಲಾಗಿದೆ.

ಇದರಿಂದ ಆತಂಕಗೊಂಡ ಸ್ಥಳೀಯರು ನಗರಸಭೆ ಪೌರಾಯುಕ್ತೆ ಜಿ.ಅಮೃತ ಅವರಿಗೆ ಮನವಿ ಸಲ್ಲಿಸಿದ ಹಿನ್ನಲೆ ಪೌರಾಯುಕ್ತರು ತಮ್ಮ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸ್ಥಳೀಯರ ಅಹವಾಲು ಆಲಿಸಿದರು.

ಈ ವೇಳೆ ಸ್ಥಳೀಯವಾಸಿ ಹಾಗೂ ಕೇಂದ್ರ ಟೆಲಿಕಾಂ ಸಲಹಾ ಸಮಿತಿ ಮಾಜಿ ಸದಸ್ಯ ವೆಂಕಟೇಶ್ ಮಾತನಾಡಿ, ರಾಜಕಾಲುವೆ ಪಕ್ಕ ಜಮೀನುಗಳಿದ್ದು ಇಲ್ಲಿ ನಮ್ಮಪ್ಪ ತಾತನ ಕಾಲದಿಂದಲೂ ಮನೆ ನಿರ್ಮಿಸಿಕೊಂಡು ವಾಸಿಸುತ್ತಿದ್ದೇವೆ. ನಗರಸಭೆಯವರೆ ನಿರ್ಮಿಸಿಕೊಟ್ಟಿದ್ದ ಕಲ್ಲು ಚಪ್ಪಡಿಗಳ ಮೋರಿ ಮೇಲೆ ಓಡಾಡುತ್ತಿದ್ದೇವೆ ಎಂದರು.

ಆದರೆ ಇದೀಗ ರಾಜ ಕಾಲುವೆಗೆ ಸಿಮೆಂಟ್ ತಡೆಗೋಡೆ ನಿರ್ಮಿಸಲು ಹೂಳು ತೆಗೆಯುವ ಕಾಮಗಾರಿ ನಡೆಯುತ್ತಿದ್ದು ಕಲ್ಲು ಚಪ್ಪಡಿಗಳ ಮೋರಿ ತೆಗೆದು ಹಾಕಿದ ಮೇಲೆ ಮತ್ತೆ ಮೋರಿ ನಿರ್ಮಿಸುವುದಿಲ್ಲ ಎಂದು ವಾರ್ಡಿನ ಸದಸ್ಯ ರಾಘವೇಂದ್ರ ಅವರು ಹೇಳಿದ್ದಾರೆ.

ಮೋರಿ ನಿರ್ಮಿಸಿಲ್ಲವಾದರೆ ನಾವು ಓಡಾಡುವುದು ಹೇಗೆ? ದನಕರುಗಳಿಗೆ ಮೇವು ಸಾಗಿಸುವುದು ಹೇಗೆ? ಬದುಕು ನಡೆಸುವುದಾದರೂ ಹೇಗೆಂದು ಪೌರಾಯುಕ್ತರನ್ನು ಪ್ರಶ್ನಿಸಿ ನಮಗೆ ಮೋರಿ ನಿರ್ಮಿಸಿ ಓಡಾಡಲು ಅನುಕೂಲ ಮಾಡಿಕೊಡುವುದಾದರೆ ಮಾತ್ರ ಈಗಿರುವ ಕಲ್ಲು ಚಪ್ಪಡಿ ಮೋರಿ ಕಿತ್ತು ಹೂಳು ತ್ಯಾಜ್ಯ ತೆಗೆಯಲು ಬಿಡುತ್ತೇವೆ ಇಲ್ಲವಾದರೆ ಬಿಡೊಲ್ಲ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತೆ ಜಿ.ಅಮೃತ ಅವರು ಈ ಜಮೀನುಗಳು ನಗರಸಭೆಗೆ ಸೇರಿಲ್ಲ. ನೀವು ಕಟ್ಟಿರುವ ಮನೆಗಳು ನಗರಸಭೆ ವ್ಯಾಪ್ತಿಗೂ ಬರುವುದಿಲ್ಲ. ರಾಜಕಾಲುವೆ ಮೇಲೆ ಮೋರಿ ನಿರ್ಮಿಸಲು ಕಾನೂನಿನಲ್ಲಿ ಅವಕಾಶ ಇಲ್ಲ. ನಮಗೂ ಅಧಿಕಾರವಿಲ್ಲ. ಬೇಕಾದರೆ ಮನವಿ ಕೊಡಿ ನಾವು ಡಿಸಿಗೆ ಬರೆಯುತ್ತೇವೆ ಎಂದರು.

ಇದರಿಂದ ಕುಪಿತಗೊಂಡ ವೆಂಕಟೇಶ್ ಮತ್ತು ಇನ್ನಿತರೆ ಸ್ಥಳೀಯರು ಈ ರಾಜಕಾಲುವೆ ಇಡೀ ನಗರದಲ್ಲಿ ಸುಮಾರು 2-3 ಕಿ.ಮೀ. ದೂರ ಹಾದು ಹೋಗಿದೆ. ಅಲ್ಲೆಲ್ಲಾ ಮೋರಿ ಹೇಗೆ ನಿರ್ಮಿಸಿದ್ದೀರಿ, ರಾಜ ಕಾಲುವೆ ಮೇಲೆ ಮನೆ ಅಂಗಡಿ ಕಾಂಪ್ಲೆಕ್ಸ್‌ಗಳು ಕಟ್ಟಿದ್ದರೂ ಅವುಗಳಿಗೆ ಅನುಮತಿ ಹೇಗೆ ಕೊಟ್ಟಿದ್ದೀರಿ.

ನಮಗೆ ಮಾತ್ರ ಮೋರಿ ಕಟ್ಟಲು ಆಗೊಲ್ಲ ಅಧಿಕಾರ ಇಲ್ಲ ಎನ್ನುತ್ತೀರಿ. ಶ್ರೀಮಂತರಿಗೆ ಒಂದು ಬಡವರಿಗೆ ಒಂದು ನ್ಯಾಯವಾ ಎಂದು ಪೌರಾಯುಕ್ತರೊಂದಿಗೆ ವಾಗ್ವಾದಕ್ಕೆ ಇಳಿದರು. ನಗರದಲ್ಲಿ ಎಲ್ಲೆಲ್ಲಿ ರಾಜಕಾಲುವೆ ಮೇಲೆ ಮೋರಿ ರಸ್ತೆ ಇದೆಯೋ ಅವೆಲ್ಲವನ್ನೂ ತೆರೆವುಗೊಳಿಸಿ ನಮ್ಮದೂ ತೆರವುಗೊಳಿಸಿ. ಅದು ಬಿಟ್ಟು ನಮ್ಮ ಮೋರಿ ಮಾತ್ರ ತೆರವುಗೊಳಿಸಲು ಬಿಡೊಲ್ಲ ಎಂದು ಪಟ್ಟು ಹಿಡಿದು ವಾದಕ್ಕಿಳಿದರು.

ಕೊನೆಗೆ ಈ ಬಗ್ಗೆ ನಗರೋತ್ಥಾನ ಯೋಜನೆಯ ಇಂಜಿನಿಯರ್‌ ಗಳು ಹಾಗೂ ಪಿಡಿ ಅವರ ಗಮನಕ್ಕೆ ತರುತ್ತೇನೆ. ಅವರು ನೀಡುವ ಸೂಚನೆ ಮಾರ್ಗದರ್ಶನದಂತೆ ಮುಂದಿನ ಕ್ರಮ ಕೈಗೊಳ್ಳುತ್ತೇನೆ. ಅದುವರೆಗೂ ಕೆಲಸಕ್ಕೆ ಯಾರೂ ಅಡ್ಡಿಪಡಿಸಬೇಡಿ ಎಂದು ಪೌರಾಯುಕ್ತೆ ಸ್ಥಳೀಯರಿಗೆ ತಿಳಿಸಿ ಅಲ್ಲಿಂದ ತೆರಳಿದರು.

ನಗರಸಭೆ ಕಂದಾಯ ಅಧಿಕಾರಿ ನಾಗರಾಜ್, ಜೆಇ ಚಕ್ರಪಾಣಿ, ಸ್ಥಳೀಯರಾದ ವೆಂಕಟೇಶ್, ದೇವರಾಜ್, ಭರತ್, ಪಿಳ್ಳಪ್ಪ, ಶ್ರೀನಿವಾಸ್, ನಾಗರಾಜ್ ಹಾಜರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version