Home News ರಾಜಕಾಲುವೆ ಹೂಳೆತ್ತುವ ಕಾಮಗಾರಿಯಲ್ಲಿ ಅಕ್ರಮ: ತನಿಖೆಗೆ ಆಗ್ರಹ

ರಾಜಕಾಲುವೆ ಹೂಳೆತ್ತುವ ಕಾಮಗಾರಿಯಲ್ಲಿ ಅಕ್ರಮ: ತನಿಖೆಗೆ ಆಗ್ರಹ

0
Sidlaghatta Bodaguru Rajakaluve Corruption

ಶಿಡ್ಲಘಟ್ಟ ತಾಲ್ಲೂಕಿನ ಬೋದಗೂರು ಕೆರೆಯ ರಾಜಕಾಲುವೆಯಲ್ಲಿ ಹೂಳೆತ್ತಿ ಅಗಲೀಕರಣ ಮಾಡುವ ಕಾಮಗಾರಿಯು ಸಣ್ಣ ನೀರಾವರಿ ಇಲಾಖೆಯಿಂದ ನಡೆಯುತ್ತಿದ್ದು, ಸಮರ್ಪಕವಾಗಿ ಕಾಮಗಾರಿ ನಡೆಯುತ್ತಿಲ್ಲ. ಅಕ್ರಮ ನಡೆದಿದೆ ಎಂದು ಕೆರೆ ಅಚ್ಚುಕಟ್ಟು ಗ್ರಾಮಸ್ಥರು ದೂರಿದ್ದು, ಸಂಬಂಧಿಸಿದ ಅಧಿಕಾರಿಗಳು ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.

 ಜಿಲ್ಲಾ ಸಣ್ಣ ನೀರಾವರಿ ಇಲಾಖೆಯಿಂದ ಶಿಡ್ಲಘಟ್ಟ ತಾಲ್ಲೂಕಿನ ಬೋದಗೂರು ಕೆರೆಗೆ ಸಂಪರ್ಕಿಸುವ ರಾಜಕಾಲುವೆಯನ್ನು ಒತ್ತುವರಿ ತೆರವುಗೊಳಿಸುವುದರೊಂದಿಗೆ ಅಗಲೀಕರಣ ಮಾಡಿ ಹೂಳೆತ್ತುವ ಕಾಮಗಾರಿ ಶುರುವಾಗಿದೆ.

 ಮುಗಿಲಡಪಿ ಮೋರಿಯಿಂದ ಬೋದಗೂರು ಕೆರೆತನಕ ಇರುವ ಒಂದೂಕಾಲು ಕಿಲೋ ಮೀಟರ್ ಉದ್ದದ ಈ ಕಾಲುವೆಯ ಹೂಳೆತ್ತುವ ಕಾಮಗಾರಿಗೆ 4 ಲಕ್ಷ ರೂಗಳು ಬಿಡುಗಡೆಯಾಗಿದೆ. ಆದರೆ ಕಾಲುವೆಯ ಒತ್ತುವರಿ ತೆರವುಗೊಳಿಸದೆ ಇದೀಗ ಕಾಲುವೆ ಹೇಗಿದೆಯೋ ಹಾಗೆ ಮಾತ್ರ ಹೂಳೆತ್ತಲಾಗುತ್ತಿದೆ. ಜತೆಗೆ ಕಾಲುವೆಯ ಆಸುಪಾಸಿನಲ್ಲಿ ರೈತರ ಹೊಲ ಗದ್ದೆ ಜಮೀನುಗಳು ಇವೆ. ಒಂದೆರಡು ಲೇಔಟ್‍ಗಳು ಇವೆ. ರೈತರ ಹೊಲ ಜಮೀನುಗಳ ಬಳಿ ಕಾಲುವೆಯನ್ನು ಸ್ವಲ್ಪ ಅಗಲೀಕರಣ ಮಾಡಲಾಗುತ್ತಿದೆಯಾದರೂ, ಲೇಔಟ್‍ಗಳನ್ನು ಮಾಡಿರುವ ಕಡೆ ಒತ್ತುವರಿಯನ್ನು ಬಿಟ್ಟು ಲೇಔಟ್ ಮಾಲೀಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕಾಮಗಾರಿ ನಡೆಸುತ್ತಿದ್ದಾರೆ ಎಂದು ಸ್ಥಳೀಯ ರೈತ ಮಳಮಾಚನಹಳ್ಳಿ ರವಿ ಬಿ ಗೌಡ ದೂರಿದ್ದಾರೆ.

 ನಕ್ಷೆಯಲ್ಲಿ ಸುಮಾರು 45 ಅಡಿ ಅಗಲದಷ್ಟು ಈ ರಾಜಕಾಲುವೆ ಇದೆ. ಆದರೆ ಒತ್ತುವರಿಗೆ ತುತ್ತಾಗಿ ಕೆಲವು ಕಡೆ ಒಂದೆರಡು ಅಡಿಗೆ ಇನ್ನು ಕೆಲವು ಕಡೆ ಐದಾರು ಅಡಿಯಷ್ಟು ಅಗಲವಷ್ಟೆ ಕಾಲುವೆ ಇದೆ. ಇಲಾಖೆಯವರು ಸರ್ವೆ ಮಾಡಿ ಕಾಲುವೆಯನ್ನು ಸರಿಯಾಗಿ ಗುರ್ತಿಸಿ ಒತ್ತುವರಿ ತೆರವುಗೊಳಿಸಿ ಕಾಮಗಾರಿ ನಡೆಸದೆ ಇದೀಗ ಕಾಲುವೆ ಯಾವ ಸ್ಥಿತಿಯಲ್ಲಿದೆಯೋ ಹಾಗೆಯೆ ಹೂಳನ್ನು ತೆಗೆಯಲು ಮುಂದಾಗಿದ್ದಾರೆ.

 ಜತೆಗೆ ಕಾಲುವೆಯ ಅಕ್ಕ ಪಕ್ಕದ ತೋಟಗಳಿದ್ದು ತೋಟಗಳಿಗೆ ಹೋಗಲು ಚಿಕ್ಕ ಮೋರಿ ನಿರ್ಮಾಣ ಮಾಡಬೇಕಿದೆ. ಆದರೆ ಮೋರಿ ನೀರ್ಮಾಣ ಮಾಡದೆ ಇರುವುದರಿಂದ ಕಾಲುವೆಯ ಹೂಳು ತೆಗೆದ ಮೇಲೆ ತೋಟಗಳಿಗೆ ಹೋಗಲು ಕಷ್ಟವಾಗಲಿದೆ ಎಂದು ಸ್ಥಳೀಯ ರೈತರು ತಿಳಿಸಿದ್ದಾರೆ.

ಈ ಬಗ್ಗೆ ಸ್ಥಳೀಯ ರೈತರು ಇಲಾಖೆಯ ಎಂಜಿನಿಯರುಗಳನ್ನು ಸಂಪರ್ಕಿಸಿ ತರಾಟೆಗೆ ತೆಗೆದುಕೊಂಡ ಮೇಲೆ ಕಾಮಗಾರಿಯನ್ನು ನಿಲ್ಲಿಸಿದ್ದಾರೆ. ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ ಕೀರ್ತಿ ಅವರು ಸರ್ವೆ ನಡೆಸಿ ಒತ್ತುವರಿ ತೆರೆವುಗೊಳಿಸಿ ಆಮೇಲೆ ಕಾಮಗಾರಿಯನ್ನು ಮುಂದುವರೆಸುತ್ತೇವೆ ಎಂದು ಭರವಸೆ ನೀಡಿ ಕಾಮಗಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version