
ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಮಂಗಳವಾರ ರಾತ್ರಿ ಬಿದ್ದ ಜೋರು ಮಳೆಗೆ ಒಂದೆಡೆ ಚೆಕ್ ಡ್ಯಾಮ್ ಗಳು, ನೀರಿನ ತೊಟ್ಟಿಗಳು, ಕಲ್ಯಾಣಿಗಳು, ಕೆರೆ ಕಟ್ಟೆಗಳಲ್ಲಿ ನೀರು ಸಂಗ್ರಹವಾಗಿದ್ದರೆ, ಮತ್ತೊಂದೆಡೆ ರಾಜ ಕಾಲುವೆಗಳ ಒತ್ತುವರಿಯಿಂದಾಗಿ ನೀರು ನುಗ್ಗಿ ಹಲವಾರು ರೈತರ ಬೆಳೆಗಳು ನಾಶವಾಗಿವೆ.
ತಾಲ್ಲೂಕಿನ ಮೇಲೂರಿನ ಕಡೆಯಿಂದ ಭಕ್ತರಹಳ್ಳಿಯ ಮುಖಾಂತರ “ಬದನ ಕೆರೆ”ಗೆ ನೀರು ಸರಾಗವಾಗಿ ಹರಿದು ಹೋಗಲು ಇದ್ದ ಕಟ್ಟುಕಾಲುವೆ ಒತ್ತುವರಿಯಾಗಿದ್ದನ್ನು ತೆರವುಗೊಳಿಸುವಂತೆ ಹಲವಾರು ತಿಂಗಳುಗಳ ಹಿಂದೆಯೇ ಈ ಭಾಗದ ರೈತರು ತಹಶೀಲ್ದಾರರಿಗೆ ಮನವಿ ಸಲ್ಲಿಸಿದ್ದರು. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಭಾಗದಲ್ಲಿ ಸುಮಾರು ಹತ್ತು ಎಕರೆಗೂ ಹೆಚ್ಚು ಕೃಷಿ ಭೂಮಿಯಲ್ಲಿ ನೀರು ನಿಂತಿದ್ದು, ಹಿಪ್ಪುನೇರಳೆ ಸೊಪ್ಪು, ರಾಗಿ, ಟೊಮೇಟೊ, ತರಕಾರಿ ಮೊದಲಾದ ಬೆಳೆಗಳು ನಾಶವಾಗಿವೆ.
ಕಂಬದಹಳ್ಳಿ, ಅಪ್ಪೇಗೌಡನಹಳ್ಳಿ ಹಾಗೂ ಮೇಲೂರಿನ ಎಲ್ಲೆಯ ನೀರು, ಮೇಲೂರಿನ ಕಟ್ಟು ಕಾಲುವೆಯ ಮುಖಾಂತರ ಹರಿದು ನಂತರ ಬೆಳ್ಳೂಟಿ ಎಲ್ಲೆಯ ಮತ್ತು ಬೆಳ್ಳೂಟಿ ಕೆರೆ ಕೋಡಿ ಕಾಲುವೆಯ ನೀರಿನೊಂದಿಗೆ ಸೇರಿ, ಭಕ್ತರಹಳ್ಳಿಯ ಮುಖಾಂತರ ಭಕ್ತರಹಳ್ಳಿಯ ಎಲ್ಲೆಯ ನೀರನ್ನೂ ಸೇರಿಸಿಕೊಂಡು ಬದನಕೆರೆ ಕಡೆಗೆ ಹರಿಯುತ್ತದೆ. ಈ ಮುಖ್ಯ ಕಾಲುವೆಯ ಹಾದಿಯಲ್ಲಿ ಮೇಲೂರಿನಿಂದ ಭಕ್ತರಹಳ್ಳಿ ಮುಖ್ಯ ರಸ್ತೆಯನ್ನು ಹಾದು ಹೋಗುವ ರಸ್ತೆಯ ಮೇಲಿನ ಸೇತುವೆಯ ನಂತರದ ಜಮೀನುಗಳವರು ಒತ್ತುವರಿ ಮಾಡಿರುತ್ತಾರೆ. ಇದರ ಪರಿಣಾಮ ನೀರು ಎಲ್ಲೆಂದರಲ್ಲಿ ನುಗ್ಗಿ ಸುತ್ತಲಿನ ಬೆಳೆಗಳಿಗೆ ಕಂಠಕಪ್ರಾಯವಾಗಿದೆ. ಯಥೇಚ್ಛವಾಗಿ ಹರಿದುಬರುವ ನೀರು ಕೆರೆಗೆ ಸರಾಗವಾಗಿ ಹರಿದುಹೋಗಲು ಅಡ್ಡಿ ಮಾಡಿರುವುದರಿಂದ ಕಾಲುವೆಯ ಅಕ್ಕಪಕ್ಕದ ರೈತರ ಜಮೀನುಗಳಿಗೆ ನೀರು ನುಗ್ಗಿ ನಷ್ಟವನ್ನು ಹೊಂದಿದ್ದಾರೆ.
ತಾಲ್ಲೂಕಿನ ಬೆಳ್ಳೂಟಿ ಗ್ರಾಮದಲ್ಲಿ ರೇಷ್ಮೆ ಹುಳು ಸಾಕಾಣಿಕೆ ಮನೆಗೆ ಮಳೆ ನೀರು ನುಗ್ಗಿ ರೇಷ್ಮೆ ಬೆಳೆಗಾರರು ಅಪಾರ ನಷ್ಟವನ್ನು ಅನುಭವಿಸಿದ್ದಾರೆ.
Like, Follow, Share ನಮ್ಮ ಶಿಡ್ಲಘಟ್ಟ
Facebook: https://www.facebook.com/sidlaghatta
Instagram: https://www.instagram.com/sidlaghatta
Telegram: https://t.me/Sidlaghatta
Twitter: https://twitter.com/hisidlaghatta
ಸುದ್ದಿಗಳು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ:
WhatsApp: https://wa.me/917406303366?text=Hi