Sidlaghatta : ಶಿಡ್ಲಘಟ್ಟ ನಗರದಲ್ಲಿ ಸ್ವಚ್ಚತೆ ಮತ್ತು ನೈರ್ಮಲ್ಯವನ್ನು ಕಾಪಾಡಿಕೊಳ್ಳುವಲ್ಲಿ ನಗರಸಭೆಯಷ್ಟೆ ನಾಗರೀಕರೂ ಸಹ ತಮ್ಮ ಕರ್ತವ್ಯವನ್ನು ಮೆರೆಯಬೇಕು, ನಿಮ್ಮ ಸಹಕಾರ ಪ್ರಯತ್ನ ಇಲ್ಲದೆ ನಗರದಲ್ಲಿ ಸ್ವಚ್ಚತೆ ನೈರ್ಮಲ್ಯ ಸಾಧ್ಯವಿಲ್ಲ ಎಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.
ಶಿಡ್ಲಘಟ್ಟ ನಗರದಲ್ಲಿನ ಸಾರಿಗೆ ಬಸ್ ನಿಲ್ದಾಣ ಬಳಿ ಶಿಡ್ಲಘಟ್ಟ-ಚಿಕ್ಕಬಳ್ಳಾಪುರ ಹೆದ್ದಾರಿ ಮಾರ್ಗದ ಪಕ್ಕದಲ್ಲಿನ ಅಮ್ಮನಕೆರೆಗೆ ಸಂಪರ್ಕಿಸುವ ರಾಜಕಾಲುವೆಯಲ್ಲಿ ಸ್ವಂತ ಖರ್ಚಿನಲ್ಲಿ ಹೂಳೆತ್ತುವ ಕಾಮಗಾರಿಯನ್ನು ಕೈಗೊಂಡಿದ್ದು ಅದನ್ನು ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಗೌಡನಕೆರೆಯಿಂದ ಅಮ್ಮನಕೆರೆಗೆ ಈ ಕಾಲುವೆ ಸಂಪರ್ಕಿಸಲಿದ್ದು ಹಲವು ವರ್ಷಗಳಿಂದಲೂ ಸ್ವಚ್ಚಗೊಳಿಸದೆ ಹೂಳು ತುಂಬಿ ಗಿಡ ಗಂಟೆಗಳು ಬೆಳೆದು ನಿಂತಿದ್ದ ಕಾರಣ ಮಳೆ ನೀರು ಹರಿಯುತ್ತಿರಲಿಲ್ಲ. ಸೊಳ್ಳೆಗಳ ಉತ್ಪತ್ತಿತಾಣವಾಗಿತ್ತು. ಜತೆಗೆ
ಶಿಡ್ಲಘಟ್ಟ ಮಾರ್ಗವಾಗಿ ಸಂಚರಿಸುವವರು ಈ ಜಾಗ ನೋಡಿಯೆ ಶಿಡ್ಲಘಟ್ಟದ ಬಗ್ಗೆ ಕೆಟ್ಟದಾಗಿ ತೀರ್ಮಾನಿಸುವಂತಾಗಿದ್ದು ಅದಕ್ಕಾಗಿ ಸ್ವಚ್ಚಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದೇನೆ ಎಂದರು.
ಈ ಕಾಲುವೆಯಲ್ಲಿ ತುಂಬಿರುವ ಹೂಳನ್ನು ತೆಗೆದು ಸ್ವಚ್ಚಗೊಳಿಸಲು ಸುಮಾರು 20 ದಿನಗಳಿಗೂ ಹೆಚ್ಚು ಕಾಲ ಬೇಕಾಗುತ್ತದೆ. ಎರಡು ಜೆಸಿಬಿಗಳು ಹಾಗೂ ಎರಡು ಮೂರು ಟ್ರ್ಯಾಕ್ಟರ್‌ಗಳು ಕಾರ್ಯನಿರ್ವಹಿಸಲಿವೆ. ಈ ಕಾಲುವೆಯ ಸ್ವಚ್ಚ ಕಾರ್ಯ ಮುಗಿದರೆ ಇಡೀ ನಗರದ ಸ್ವಚ್ಚತಾ ಕಾರ್ಯ ಮುಗಿದಂತಾಗುತ್ತದೆ ಎಂದರು.
ನಗರದಲ್ಲಿನ ಎಲ್ಲ ವಾರ್ಡುಗಳು, ಪ್ರಮುಖವಾದ ಚರಂಡಿ ಮೋರಿಗಳನ್ನು ಸ್ವಚ್ಚಗೊಳಿಸುವ ಕಾರ್ಯ ಮುಗಿದಿದೆ. ಬೈಪಾಸ್ ರಸ್ತೆಗಳ ಅಕ್ಕಪಕ್ಕ ಸುರಿದಿದ್ದ ಕಟ್ಟಡಗಳ ತ್ಯಾಜ್ಯವನ್ನು ತೆರೆವುಗೊಳಿಸಿದ್ದೇವೆ. ಆದರೆ ಮತ್ತೆ ಅಲ್ಲಿ ಕಟ್ಟಡ ತ್ಯಾಜ್ಯವನ್ನು ಸುರಿಯದಂತೆ ಮತ್ತು ವಾರ್ಡುಗಳಲ್ಲಿ ಸ್ವಚ್ಚತೆಯನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಹೊಣೆ ಅದು ನಿತ್ಯ ನಡೆಯುವ ಕಾಯಕವಾಗಿದ್ದು ಎಲ್ಲರೂ ಸಹಕರಿಸಬೇಕೆಂದು ಕೋರಿದರು.