Sidlaghatta, chikkaballapur : “ರೈತ ಸಂಘಟನೆಗಳು ಯಾವುದೇ ರಾಜಕೀಯ ಪಕ್ಷದ ಮುಖವಾಣಿ ಆಗಬಾರದು. ರೈತರ ಹಿತಕ್ಕಾಗಿ ನಿಷ್ಠೆಯಿಂದ ಹೋರಾಡಿದಾಗ ಮಾತ್ರ ಸಂಘಟನೆಗೂ ಗೌರವ, ಹೋರಾಟಕ್ಕೂ ಫಲ ಸಿಗುತ್ತದೆ,” ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯಾಧ್ಯಕ್ಷ ಜಿಜಿಹಳ್ಳಿ ಬಿ. ನಾರಾಯಣಸ್ವಾಮಿ ಹೇಳಿದರು.
ನಗರದ ಶ್ರೀ ಕಾಳಿಕಾಂಬ ಕಮ್ಮಟೇಶ್ವರ ದೇವಾಲಯದ ಸಮುದಾಯ ಭವನದಲ್ಲಿ ಬುಧವಾರ ನಡೆದ ತಾಲ್ಲೂಕು ನೂತನ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದ ರೈತರು ಇಂದು ಎದುರಿಸುತ್ತಿರುವ ಅನೇಕ ಜ್ವಲಂತ ಸಮಸ್ಯೆಗಳಿಗೆ ಸಂಘಟಿತ ಹೋರಾಟದ ಅವಶ್ಯಕತೆ ಇದೆ ಎಂದು ಒತ್ತಿಹೇಳಿದರು.
“ರೈತ ಸಂಘದ ಹೋರಾಟಗಳು ರಾಜಕೀಯಕ್ಕಾಗಿರಬಾರದು, ರೈತರ ಹಿತಕ್ಕಾಗಿ ಇರಬೇಕು. ಸಂಘಟನೆಯ ಪದಾಧಿಕಾರಿಗಳು ಕೈ ಮತ್ತು ಬಾಯಿ ಎರಡನ್ನೂ ಸ್ವಚ್ಛವಾಗಿಟ್ಟುಕೊಳ್ಳಬೇಕು, ಆಗ ಮಾತ್ರ ರೈತರ ವಿಶ್ವಾಸ ಸಿಗುತ್ತದೆ.” ಎಂದು ಅವರು ಹೇಳಿದರು.
ನಗರದ ಅಭಿವೃದ್ಧಿ ವಿಚಾರವಾಗಿ ಮಾತನಾಡಿದ ಅವರು, “ಶಿಡ್ಲಘಟ್ಟ ನಗರವು ಅಭಿವೃದ್ಧಿಯಲ್ಲಿ ಶೂನ್ಯ ಸಾಧಿಸಿದೆ. ನಗರಸಭೆ ನಾಮಮಾತ್ರಕ್ಕೆ ಇದ್ದು, ಸ್ವಚ್ಛತೆಯೇ ಕಾಣದ ಸ್ಥಿತಿ ಉಂಟಾಗಿದೆ,” ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ಹೊಸ ತಾಲ್ಲೂಕು ಅಧ್ಯಕ್ಷರಾಗಿ ಬಿ.ಕೆ. ಮುನಿರಾಜು ಆಯ್ಕೆಯಾಗಿದರು. ಉಪಾಧ್ಯಕ್ಷರಾಗಿ ಕೆಂಪೇಗೌಡ, ಪ್ರಧಾನ ಕಾರ್ಯದರ್ಶಿಯಾಗಿ ಪ್ರಕಾಶ್ ಎಸ್, ಕಾನೂನು ಸಲಹೆಗಾರರಾಗಿ ಲಕ್ಷ್ಮಿಕಾಂತ್ ಪಿ, ಖಜಾಂಚಿಯಾಗಿ ಎಂ.ಟಿ. ಶ್ರೀನಿವಾಸ್, ಮಹಿಳಾ ಪ್ರತಿನಿಧಿಗಳಾಗಿ ಎಸ್.ಎಂ. ಅಮೃತ ಮತ್ತು ಗಾಯತ್ರಿ ಎನ್ ಅವರನ್ನು ಆಯ್ಕೆ ಮಾಡಲಾಯಿತು.
ಇದಲ್ಲದೆ ಸಂಘಟನಾ ಮಾರ್ಗದರ್ಶಕರಾಗಿ ಎನ್. ವೆಂಕಟೇಶ್, ಪ್ರಧಾನ ಸಂಚಾಲಕರಾಗಿ ಬಿ.ಕೆ. ಗೋವಿಂದರಾಜು, ಸಂಘಟನಾ ಸಂಚಾಲಕರಾಗಿ ಶಿವಣ್ಣ, ಸಹಕಾರ್ಯದರ್ಶಿಯಾಗಿ ಬಿ.ಪಿ. ಸತೀಶ್ ಕುಮಾರ್, ಹಾಗೂ ಸಂಘಟನಾ ಕಾರ್ಯದರ್ಶಿಯಾಗಿ ಮುರಳಿಕುಮಾರ್ ಅವರನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ತಾಲ್ಲೂಕಿನ ವಿವಿಧ ಹಳ್ಳಿಗಳ ರೈತರು, ಕಾರ್ಯಕರ್ತರು ಮತ್ತು ಸಂಘಟನೆಯ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.
For Daily Updates WhatsApp ‘HI’ to 7406303366









