Sadali, Sidlaghatta : “ಗ್ರಾಮೀಣ ಮತ್ತು ನಗರ ಪ್ರದೇಶಗಳ ಆರ್ಥಿಕ ಪ್ರಗತಿಗೆ ಸುಸಜ್ಜಿತ ರಸ್ತೆ ಸಂಪರ್ಕವೇ ಅಡಿಪಾಯ. ಸಾರ್ವಜನಿಕರ ದಶಕಗಳ ಬೇಡಿಕೆಯಂತೆ ಸಾದಲಿ ಭಾಗದ ರಸ್ತೆಯನ್ನು ₹7.5 ಕೋಟಿ ವೆಚ್ಚದಲ್ಲಿ ಮಾದರಿಯಾಗಿ ಅಭಿವೃದ್ಧಿಪಡಿಸಲಾಗುತ್ತಿದೆ,” ಎಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.
ತಾಲ್ಲೂಕಿನ ಸಾದಲಿ ಕ್ರಾಸ್‌ನಿಂದ ಚಿಕ್ಕಬಳ್ಳಾಪುರ ತಾಲ್ಲೂಕಿನ ಗಡಿಯವರೆಗಿನ ಮುಖ್ಯ ರಸ್ತೆಯ ಅಗಲೀಕರಣ ಮತ್ತು ಡಾಂಬರೀಕರಣ ಕಾಮಗಾರಿಯನ್ನು ಸ್ಥಳೀಯರೊಂದಿಗೆ ವೀಕ್ಷಿಸಿ ಅವರು ಮಾತನಾಡಿದರು. ಈ ರಸ್ತೆಯು ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಕೊಂಡಿಯಾಗಿದ್ದು, ವ್ಯಾಪಾರ ಮತ್ತು ದೈನಂದಿನ ವ್ಯವಹಾರಗಳಿಗೆ ಈ ಭಾಗದ ರೈತರು ಹಾಗೂ ಸಾರ್ವಜನಿಕರಿಗೆ ಬಹಳ ಅನುಕೂಲವಾಗಲಿದೆ.

ತೆರಿಗೆ ಹಣದ ಸದುಪಯೋಗವಾಗಲಿ: “ರಸ್ತೆ ನಿರ್ಮಾಣಕ್ಕೆ ಬಳಕೆಯಾಗುತ್ತಿರುವುದು ಜನರ ತೆರಿಗೆ ಹಣ. ಹೀಗಾಗಿ ಕಾಮಗಾರಿ ನಡೆಯುವಾಗ ಗುಣಮಟ್ಟದ ಬಗ್ಗೆ ಸ್ಥಳೀಯರು ನಿಗಾ ವಹಿಸಬೇಕು. ಕೇವಲ ಅಧಿಕಾರಿಗಳ ಮೇಲೆ ಅವಲಂಬಿತವಾಗದೆ, ಕಾಮಗಾರಿ ಸರಿಯಾಗಿ ನಡೆಯುತ್ತಿದೆಯೇ ಎಂಬುದನ್ನು ಸಾರ್ವಜನಿಕರೇ ಪರಿಶೀಲಿಸಿದಾಗ ಮಾತ್ರ ಸುದೀರ್ಘ ಕಾಲ ಬಾಳಿಕೆ ಬರುವ ಗುಣಮಟ್ಟದ ರಸ್ತೆ ನಿರ್ಮಾಣ ಸಾಧ್ಯ,” ಎಂದು ಶಾಸಕರು ಕರೆ ನೀಡಿದರು.
ಸಾದಲಿ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಗ್ರಾಮಸ್ಥರು ವ್ಯವಹಾರಿಕವಾಗಿ ಚಿಕ್ಕಬಳ್ಳಾಪುರದ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ರಸ್ತೆ ಸರಿಯಿಲ್ಲದ ಕಾರಣ ಅನುಭವಿಸುತ್ತಿದ್ದ ಸಂಕಷ್ಟಕ್ಕೆ ಈಗ ಮುಕ್ತಿ ಸಿಗಲಿದೆ. ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲಾಗುವುದು ಎಂದು ಶಾಸಕರು ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಗ್ರಾಮಸ್ಥರು ತಮ್ಮ ಭಾಗದ ಇತರೆ ಮೂಲಭೂತ ಸೌಕರ್ಯಗಳ ಬಗ್ಗೆ ಶಾಸಕರೊಂದಿಗೆ ಚರ್ಚಿಸಿ, ರಸ್ತೆ ಕಾಮಗಾರಿ ಆರಂಭಿಸಿದ್ದಕ್ಕೆ ಅಭಿನಂದನೆ ಸಲ್ಲಿಸಿದರು.








