Sadali, Sidlaghatta, chikkaballapur : ಶಿಡ್ಲಘಟ್ಟ ತಾಲ್ಲೂಕಿನ ಸಾದಲಿ ಗ್ರಾಮದಲ್ಲಿ ಶ್ರೀ ವೀರಗಾರಸ್ವಾಮಿ ದೇವಸ್ಥಾನ ಸೇವಾ ಟ್ರಸ್ಟ್ ವತಿಯಿಂದ ಭಾನುವಾರ ಭವ್ಯವಾಗಿ ಶ್ರೀ ವೀರಗಾರಸ್ವಾಮಿ ದೇವರ ನೂತನ ದೇವಸ್ಥಾನ ಕಟ್ಟಡ ಉದ್ಘಾಟನೆ, ಶಾಶ್ವತ ಸ್ಥಿರಶಿಲಾಬಿಂಬ ಪ್ರತಿಷ್ಠಾಪನೆ ಹಾಗೂ ವಿಮಾನ ಗೋಪುರ ಕಳಶ ಸ್ಥಾಪನೆ ಮಹೋತ್ಸವ ನಡೆಯಿತು.
ಶುಕ್ರವಾರದಿಂದಲೇ ಪ್ರಾರಂಭವಾದ ಪೂಜಾ ಕೈಂಕರ್ಯಗಳು ಭಾನುವಾರದವರೆಗೂ ನಿರಂತರವಾಗಿ ನಡೆದವು. ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿ, ಪ್ರಸಿದ್ಧ ಶಿಲ್ಪಿ ಮತ್ತು ಮೈಸೂರಿನ ಡಾ. ಅರುಣ್ ಯೋಗಿರಾಜ್ ಅವರು ದೇವರ ವಿಗ್ರಹದ ನೇತ್ರಮಿಲನ ಕಾರ್ಯಕ್ರಮ ನೆರವೇರಿಸಿದರು.
ಈ ಭವ್ಯ ಧಾರ್ಮಿಕ ಕಾರ್ಯಕ್ರಮದಲ್ಲಿ ಸಾದಲಿಯ ಜೊತೆಗೆ ರಾಮಗೊಂಡನಹಳ್ಳಿ, ಬಿದಿರಹಳ್ಳಿ, ಮಹಾದೇವಕೊಡಿಗೇಹಳ್ಳಿ, ವೆಂಕಟೇನಹಳ್ಳಿ, ಧರ್ಮಪುರಿ, ಥಣಿಸಂದ್ರ, ದೇವರಜೀವನಹಳ್ಳಿ, ಸುಗಟೂರು, ಜಂಗಮಕೋಟೆ, ಮಂಚನಬಲೆ, ಪಾಪನಹಳ್ಳಿ, ಗೌಡನಹಳ್ಳಿ, ಅಮ್ಮಗಾರಹಳ್ಳಿ, ಮರದೇನಹಳ್ಳಿ, ನಲ್ಲನಾರನಹಳ್ಳಿ ಗ್ರಾಮಗಳ ಕುಲಬಾಂಧವರು ಮತ್ತು ಭಕ್ತರು ಬಹು ಸಂಖ್ಯೆಯಲ್ಲಿ ಭಾಗವಹಿಸಿ ಧಾರ್ಮಿಕ ಉತ್ಸವವನ್ನು ಯಶಸ್ವಿಗೊಳಿಸಿದರು.
ಶ್ರೀ ವೀರಗಾರಸ್ವಾಮಿ ದೇವಸ್ಥಾನ ಸೇವಾ ಟ್ರಸ್ಟ್ ಅಧ್ಯಕ್ಷ ಎಸ್. ಪ್ರಭಾಕರ್, ಉಪಾಧ್ಯಕ್ಷ ಮುನಿನಂಜಪ್ಪ, ಸಾದಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾ ಪೆದ್ದಪ್ಪಯ್ಯ, ಸದಸ್ಯ ವಿಜಯಾನಂದ (ಆವಲರೆಡ್ಡಿ), ಗೌರವಾಧ್ಯಕ್ಷ ಕೇಬಲ್ ಮುನಿರಾಜು, ಕಾರ್ಯದರ್ಶಿ ಎಂ. ಹೇಮಂತ್ ಕುಮಾರ್, ಬಿ.ಕೆ. ಮಧುಕುಮಾರ್, ಡಿ. ಕೆಂಚಣ್ಣ, ವೆಂಕಟೇಶ್, ಎಂ. ರಾಮಚಂದ್ರಪ್ಪ, ಬಿ. ನಾರಾಯಣಸ್ವಾಮಿ, ಎನ್. ಜಗದೀಶ್, ಕೆ. ಮುನೇಗೌಡ, ಕೆ. ಪ್ರಕಾಶ್, ಕುಬೇರ ಹಾಗೂ ಅನೇಕ ಗ್ರಾಮಸ್ಥರು ಹಾಜರಿದ್ದರು.
ಉತ್ಸವದ ವೇಳೆ ಭಕ್ತರು ಹೂವಿನ ಅಲಂಕಾರಗಳಿಂದ ಸಿಂಗರಿಸಲಾದ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ತೀರ್ಥ ಪ್ರಸಾದ ಸ್ವೀಕರಿಸಿದರು.







