Home News ED ದಾಳಿ ರಾಜಕೀಯ ಪ್ರೇರಿತ ಅಲ್ಲ, ಅದೊಂದು ಸಹಜ ಕಾನೂನು ಪ್ರಕ್ರಿಯೆ

ED ದಾಳಿ ರಾಜಕೀಯ ಪ್ರೇರಿತ ಅಲ್ಲ, ಅದೊಂದು ಸಹಜ ಕಾನೂನು ಪ್ರಕ್ರಿಯೆ

0
Sidlaghatta Seekal Ramachandra Gowda ED Raid

Sidlaghatta : ಅಕ್ರಮ ಆಸ್ತಿಗಳಿಕೆ, ವಿದೇಶಿ ವಿನಿಮಯ ನಿರ್ವಹಣೆ ಕಾಯಿದೆ ಉಲ್ಲಂಘನೆ ಆರೋಪದಡಿ ಬಾಗೇಪಲ್ಲಿ ಕ್ಷೇತ್ರದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರ ವಿವಿಧ ಕಡೆಯ ನಿವಾಸ, ಕಚೇರಿಗಳ ಮೇಲೆ ಇಡಿ ದಾಳಿ ನಡೆಸಿದ್ದು ರಾಜಕೀಯ ಪ್ರೇರಿತ ಅಲ್ಲ, ಅದೊಂದು ಸಹಜ ಕಾನೂನು ಪ್ರಕ್ರಿಯೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ತಿಳಿಸಿದರು.

ನಗರದಲ್ಲಿನ ಬಿಜೆಪಿ ಸೇವಾ ಸೌಧ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಇಡಿ ದಾಳಿಯಿಂದ ಆತಂಕ, ಭಯ ಬಿದ್ದಿರುವ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಪರಾಜಿತ ಅಭ್ಯರ್ಥಿಯ ಪಿತೂರಿಯಿಂದ ಇಡಿ ದಾಳಿ ನಡೆಸಿದೆ ಎಂದು ಆರೋಪಿಸಿರುವುದು ಸತ್ಯಕ್ಕೆ ದೂರ ಎಂದರು.

ಕಳೆದ ವಿಧಾನಸಭೆ ಚುನಾವಣೆ ಸಮಯದಲ್ಲಿ ಎಸ್.ಎನ್.ಸುಬ್ಬಾರೆಡ್ಡಿ ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಆಸ್ತಿ ಆದಾಯದ ಅಫಿಡವಿಟ್‌ನಲ್ಲಿ ಕೆಲ ಆಸ್ತಿ, ಆದಾಯದ ಮೂಲಗಳನ್ನು ಮುಚ್ಚಿಟ್ಟು ಆಯೋಗಕ್ಕೆ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ದಾಖಲೆಗಳ ಸಮೇತ ನ್ಯಾಯಾಲಯಕ್ಕೆ ದೂರು ಸಲ್ಲಿಸಲಾಗಿದೆ.

ಪ್ರಕರಣ ನ್ಯಾಯಾಲಯದಲ್ಲಿ ಇದೆ. ನ್ಯಾಯಾಲಯದ ತೀರ್ಪಿಗೆ ಎಲ್ಲರೂ ತಲೆ ಬಾಗಲೇಬೇಕು. ಇದೀಗ ಇಡಿ ದಾಳಿ ನಡೆಸಿದ್ದು ದಾಖಲೆಗಳ ಪರಿಶೀಲನೆ ನಡೆಸಲಿದ್ದು ಶಾಸಕ ಸುಬ್ಬಾರೆಡ್ಡಿ ಅವರು ಸೂಕ್ತ ದಾಖಲೆ, ಉತ್ತರ ನೀಡಿದರೆ ಅವರು ಇಡಿ ದಾಳಿಯ ಕಾನೂನಿನ ಕುಣಿಕೆಯಿಂದ ಪಾರಾಗಲಿದ್ದಾರೆ.

ಒಂದೊಮ್ಮೆ ಸೂಕ್ತ ದಾಖಲೆ ನೀಡದಿದ್ದಲ್ಲಿ ಮತ್ತು ಕಾನೂನು ಉಲ್ಲಂಘಿಸಿ ಅಧಿಕ ಆಸ್ತಿ ಸಂಪಾದಿಸಿ ಮಾಹಿತಿ ಮುಚ್ಚಿಟ್ಟಿದರೆ ಅವರು ಕಾನೂನಿನ ಕ್ರಮ ಎದುರಿಸಬೇಕಾಗುತ್ತದೆ. ಇಡಿ ಕೇಳುವ ಎಲ್ಲ ಮಾಹಿತಿಯನ್ನು ಒದಗಿಸಿ ಅದು ಸರಿಯಾಗಿದ್ದಲ್ಲಿ ಏನೂ ಸಮಸ್ಯೆಯಾಗದು ಎಂದರು.

ಸಂವಿಧಾನ ಬದ್ಧವಾಗಿ ಶಾಸಕರಾಗಿ ಆಯ್ಕೆಯಾದವರು ಮೊದಲು ಕಾನೂನನ್ನು ಗೌರವಿಸುವಂತಾಗಬೇಕು, ಆ ಮೂಲಕ ಕ್ಷೇತ್ರದ ಮತದಾರರಿಗೆ ಮಾದರಿಯಾಗಬೇಕು, ಅದು ಬಿಟ್ಟು ಇನ್ನೊಬ್ಬರ ಮೇಲೆ ವಿನಾಕಾರಣ ಸುಳ್ಳು ಆರೋಪ ಮಾಡುವುದು ಶಾಸಕರಿಗೆ ಸೂಕ್ತವಲ್ಲ ಎಂದರು.

ನೀವು ಈಗಾಗಲೇ ಸಚಿವ ಸ್ಥಾನಕ್ಕೆ ಕಣ್ಣಿಟ್ಟು ಟವೆಲ್ ಹಾಕಿದ್ದೀರಿ. ನಿಮ್ಮ ಕಾಂಗ್ರೆಸ್ ಪಕ್ಷದಲ್ಲಿ ಸಚಿವ ಆಕಾಂಕ್ಷಿಗಳ ದಂಡು ಇದ್ದು ನಿಮಗೆ ಸಚಿವ ಸ್ಥಾನವನ್ನು ತಪ್ಪಿಸಲು ನಿಮ್ಮದೇ ಕಾಂಗ್ರೆಸ್ ಪಕ್ಷದ ಸಚಿವ ಸ್ಥಾನದ ಆಕಾಂಕ್ಷಿಗಳು ಏಕೆ ಪಿತೂರಿ ನಡೆಸಿರಬಾರದು ಎಂದು ಅವರು ಪ್ರಶ್ನಿಸಿದರು.

ಮೊದಲು ನಿಮ್ಮ ಪಕ್ಷದಲ್ಲಿನ ನಿಮ್ಮ ಶತ್ರುಗಳನ್ನು ಗುರುತಿಸಿ ಅವರು ಮಾಡುವ ಪಿತೂರಿಗಳಿಂದ ತಪ್ಪಿಸಿಕೊಳ್ಳಿ ಆನಂತರ ಬೇರೆ ಪಕ್ಷದವರ ಬಗ್ಗೆ ಮಾತನಾಡಿ ಎಂದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version