Sidlaghatta : ಸಾಲ ಪಡೆದ ರೈತರು ಸಕಾಲಕ್ಕೆ ಮರುಪಾವತಿ ಮಾಡಿದಾಗ ಮಾತ್ರ ಸಹಕಾರಿ ಸಂಘಗಳ ಉಳಿವಿಗೆ ಸಹಕಾರಿಯಾಗುತ್ತದೆ ಎಂದು ಮಾಜಿ ಶಾಸಕ ಎಂ. ರಾಜಣ್ಣ ಹೇಳಿದರು.
ನಗರೇಶ್ವರ ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆದ ಶಿಡ್ಲಘಟ್ಟ ಟೌನ್ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ 2024-25 ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, 1976ರಲ್ಲಿ ಸ್ಥಾಪಿತವಾದ ಈ ಸಂಘವು 49 ವರ್ಷಗಳಿಂದ ರೈತರ ಆರ್ಥಿಕ ಹಿತದೃಷ್ಟಿಯಿಂದ ಕಾರ್ಯನಿರ್ವಹಿಸುತ್ತಿದೆ ಎಂದು ನೆನಪಿಸಿದರು. ಕಳೆದ ಎರಡು ವರ್ಷಗಳಿಂದ ಜಿಲ್ಲಾ ಡಿಸಿಸಿ ಬ್ಯಾಂಕಿನಲ್ಲಿ ಉಂಟಾದ ಕಾನೂನು ತೊಡಕುಗಳಿಂದ ಸಾಲ ವಿತರಣೆ ತಾತ್ಕಾಲಿಕವಾಗಿ ನಿಂತಿದ್ದರೂ, ಇತ್ತೀಚಿನ ಚುನಾವಣೆಯ ಬಳಿಕ ಸಮಸ್ಯೆ ಪರಿಹಾರಗೊಂಡು ಶೀಘ್ರದಲ್ಲೇ ರೈತರು ಹಾಗೂ ಮಹಿಳಾ ಸಂಘಗಳಿಗೆ ಸಾಲ ವಿತರಣೆ ಪುನರಾರಂಭವಾಗಲಿದೆ ಎಂದರು.
ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಂಕ್ ಮುನಿಯಪ್ಪ ಮಾತನಾಡಿ, ಸರ್ಕಾರದಿಂದ ನೀಡಲಾಗುವ ಶೂನ್ಯ ಬಡ್ಡಿದರ ಸಾಲವನ್ನು ಸಕಾಲದಲ್ಲಿ ಪಾವತಿಸುವುದು ರೈತರ ಜವಾಬ್ದಾರಿ ಎಂದರು. ಡಿಸಿಸಿ ಬ್ಯಾಂಕ್ ಸದಸ್ಯ ಎ. ನಾಗರಾಜ್ ಕೂಡಾ ಸಾಲ ಮರುಪಾವತಿ ಸಮಯಕ್ಕೆ ಆಗಲೇ ಆಗಬೇಕು, ಇಲ್ಲವಾದರೆ ಇತರರಿಗೆ ಸಾಲ ನೀಡಲು ಅಡಚಣೆಯಾಗುತ್ತದೆ ಎಂದು ರೈತರಿಗೆ ಮನವಿ ಮಾಡಿದರು.
ಸಂಘದ ಅಧ್ಯಕ್ಷ ಜೆ.ಎನ್. ರಾಮಚಂದ್ರಪ್ಪ ಮಾತನಾಡಿ, ಮುಚ್ಚುವ ಹಂತದಲ್ಲಿದ್ದ ಸಂಘವನ್ನು ಪುನಶ್ಚೇತನಗೊಳಿಸಲು ಸದಸ್ಯರ ಸಹಕಾರವೇ ಕಾರಣ ಎಂದು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ರೈತರಿಗೆ ಹೆಚ್ಚಿನ ಪ್ರಮಾಣದ ಸಾಲ ವಿತರಣೆ ಮಾಡುವ ಗುರಿ ಹೊಂದಿದ್ದೇವೆ ಎಂದರು.
ರಾಜ್ಯ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಭೈರೇಗೌಡ, ಹುಜಗೂರು ಎಂ.ರಾಮಯ್ಯ ಮಾತನಾಡಿದರು.
ಅಧ್ಯಕ್ಷ ಜೆ.ಎನ್.ರಾಮಚಂದ್ರಪ್ಪ, ಉಪಾಧ್ಯಕ್ಷೆ ಎಂ.ಶೋಭಾರಾಣಿ, ಮಾಜಿ ಅಧ್ಯಕ್ಷ ಬಿ.ನಾರಾಯಣಸ್ವಾಮಿ, ನಿರ್ದೇಶಕರಾದ ನರಸಿಂಹಮೂರ್ತಿ, ಪಿ.ಎನ್.ಪ್ರಶಾಂತ್, ಟಿ.ಎ.ನಾರಾಯಣಪ್ಪ, ಎನ್.ನರಸಿಂಹಯ್ಯ, ಪ್ರಭಾವತಿ, ನಳಿನ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಕೋಟಹಳ್ಳಿ ಶ್ರೀನಿವಾಸ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ದೇವಿಕ, ಮುಖಂಡರಾದ ಡಿ.ಎಂ.ಜಗದೀಶ್ವರ್, ಕೆ.ಎಸ್.ಕನಕಪ್ರಸಾದ್ ಹಾಜರಿದ್ದರು.