Shettyhalli, Sidlaghatta : ತೋಟದಿಂದ ವಾಪಸ್ ಬರುತ್ತಿದ್ದಾಗ ಕೈಕಾಲು ತೊಳೆಯಲು ಕೆರೆ ನೀರಿಗೆ ಇಳಿದ ಮಗಳು ಕಾಲು ಜಾರಿ ಬಿದ್ದಿದ್ದು, ಆಕೆಯನ್ನು ಉಳಿಸಲು ನೀರಿಗೆ ಹಾರಿ ರಕ್ಷಿಸಲು ಹೋದ ಅಪ್ಪನೂ ಮುಳುಗಿ ಸಾವನ್ನಪ್ಪಿದ ದುಃಖದ ಘಟನೆ ಶೆಟ್ಟಹಳ್ಳಿ ಕೆರೆಯಲ್ಲಿ ಶುಕ್ರವಾರ ಸಂಜೆ ಸಂಭವಿಸಿದೆ.
ಶೆಟ್ಟಹಳ್ಳಿ ಗ್ರಾಮದ ರೈತ ನಾಗೇಶ್ (48) ಮತ್ತು ಅವರ ಮಗಳು ಧನುಶ್ರೀ (13) ಅವರು ಈ ದುರ್ಘಟನೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.
ಬೆಳಗ್ಗೆ ತೋಟಕ್ಕೆ ಹೋದ ನಾಗೇಶ್, ತನ್ನ ಮಗಳೊಂದಿಗೆ ಸಂಜೆ ವಾಪಸ್ಸಾಗುತ್ತಿದ್ದಾಗ ದಾರಿ ಪಕ್ಕದ ಕೆರೆಯ ಬಳಿ ವಿಶ್ರಾಂತಿ ತೆಗೆದುಕೊಳ್ಳಲು ನಿಂತಿದ್ದರು. ಈ ವೇಳೆ ಧನುಶ್ರೀ ಕೈಕಾಲು ತೊಳೆಯಲು ಕೆರೆಯ ನೀರಿಗೆ ಇಳಿದಾಗ ಕಾಲು ಜಾರಿ ನೀರಿನಲ್ಲಿ ಬಿದ್ದಿದ್ದಾಳೆ.
ತಕ್ಷಣ ಮಗಳನ್ನು ಉಳಿಸಲು ನೀರಿಗೆ ಹಾರಿದ ನಾಗೇಶ್ ಅವರೂ ನೀರಿನ ಸೆರೆಗೆ ಸಿಲುಕಿದ್ದು, ಇಬ್ಬರೂ ಬದುಕನ್ನು ಕಳೆದುಕೊಂಡರು.
ಈ ಬಗ್ಗೆ ಮೃತ ನಾಗೇಶ್ ಅವರ ಮಗ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತರ ಶವಗಳನ್ನು ಶಿಡ್ಲಘಟ್ಟ ಸಾರ್ವಜನಿಕ ಆಸ್ಪತ್ರೆಗೆ ಕೊಂಡೊಯ್ದು ಶವ ಪರೀಕ್ಷೆ ನಡೆಸಿದ ಬಳಿಕ ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ.
ಶಿಡ್ಲಘಟ್ಟ ಶಾಸಕ ಬಿ.ಎನ್. ರವಿಕುಮಾರ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿದರು.
For Daily Updates WhatsApp ‘HI’ to 7406303366









