Sidlaghatta : “ಗಂಗೆಯ ಒಂದು ತೊಟ್ಟು ಸಾಕು ಮುಕ್ತಿ ದೊರಕಲು. ಗಂಗಾ ಸ್ನಾನ, ತುಂಗಾ ಪಾನ ಎಂದಿನಂತೆ, ಪವಿತ್ರ ಗಂಗೆಯ ಜಲ ಸೇವನೆಯಿಂದ ಸಕಲ ಪಾಪಗಳು ನಾಶವಾಗುತ್ತವೆ. ಇದಕ್ಕೆ ಔಷಧಿ ಗುಣಗಳೂ ಇವೆ. ಈ ಪವಿತ್ರ ಜಲದಿಂದ ಜನರ ಕಷ್ಟಗಳು ನಿವಾರಣೆಯಾಗಲಿ, ಎಲ್ಲರಿಗೂ ಆರೋಗ್ಯ ಕಾಪಾಡಲಿ, ಹಾಗೂ ಮಳೆ-ಬೆಳೆ ಚೆನ್ನಾಗಿ ಆಗಲಿ ಎಂಬ ಉದ್ದೇಶದಿಂದ ಗಂಗಾಜಲ ವಿತರಿಸುತ್ತಿದ್ದೇವೆ” ಎಂದು ಕರ್ನಾಟಕ ಜಾನಪದ ಪರಿಷತ್ತು ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್ ಹೇಳಿದರು.
ಕರ್ನಾಟಕ ಜಾನಪದ ಪರಿಷತ್ತು ಮತ್ತು ಅಶ್ವಿನಿ ಗೋವರ್ಧನ ಚಾರಿಟಬಲ್ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಭಕ್ತರಹಳ್ಳಿಯ ಓಂಕಾರೇಶ್ವರ ದೇವಾಲಯದಲ್ಲಿ ಮಂಗಳವಾರ ಗಂಗಾ ಪೂಜೆ ನೆರವೇರಿಸಿ, ತಾಲ್ಲೂಕಿನ ವಿವಿಧ ಈಶ್ವರ ದೇವಾಲಯಗಳಿಗೆ ಗಂಗಾಜಲ ವಿತರಣೆ ಮಾಡಲಾಯಿತು.
“ಈ ಭಾಗದಲ್ಲಿ ಗಂಗಾಜಲ ಸಿಗುವುದಿಲ್ಲ. ಹರಿದ್ವಾರ ಹಾಗೂ ಕಾಶಿಯಿಂದ ಮಾತ್ರ ಲಭ್ಯವಾಗುವ ಈ ಪವಿತ್ರ ಜಲವನ್ನು, ಅಶ್ವಿನಿ ಗೋವರ್ಧನ ಚಾರಿಟಬಲ್ ಟ್ರಸ್ಟ್ ನೆರವಿನಿಂದ ಬೆಂಗಳೂರಿಗೆ ತರಿಸಿಕೊಳ್ಳಲಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಈ ಶ್ರಮವನ್ನು ಮಾಡುತ್ತಿದ್ದೇವೆ. ಗಂಗಾಜಲದಿಂದ ಶಿವನಿಗೆ ಅಭಿಷೇಕ ಮಾಡಿದರೆ, ನಾಡಿಗೆ ಮಳೆ-ಬೆಳೆ ಸಮೃದ್ಧಿಯಾಗಿ ಸುಭಿಕ್ಷತೆ ತಂದುಕೊಡುತ್ತದೆ ಎಂಬ ಜನಮಾನ್ಯತೆಯಿದೆ. ಈ ಬಾರಿ ಮಹಾಕುಂಭಮೇಳವೂ ನಡೆಯುತ್ತಿರುವುದರಿಂದ, ಶಿವರಾತ್ರಿಯನ್ನು ವಿಶೇಷವಾಗಿ ಆಚರಿಸಿ ಶಿವನ ಕೃಪೆಗೆ ಪಾತ್ರರಾಗೋಣ” ಎಂದು ಅವರು ಶುಭಾಶಯ ಕೋರಿದರು.
ಈ ಸಂದರ್ಭದಲ್ಲಿ ಭಕ್ತರಹಳ್ಳಿಯ ರಾಮಣ್ಣ, ಲಕ್ಷ್ಮೀನಾರಾಯಣ್, ಮುನಿಕೃಷ್ಣಪ್ಪ, ನಾಗೇಶ್, ಶ್ರೀನಿವಾಸ್, ಕೆಂಪೇಗೌಡ, ಚಂದ್ರಪ್ಪ, ಪಾರ್ವತಮ್ಮ ಹಾಗೂ ಶಿವ ದೇವಾಲಯದ ಅರ್ಚಕರು ಹಾಜರಿದ್ದರು.
For Daily Updates WhatsApp ‘HI’ to 7406303366









