Sidlaghatta : ಶಿಡ್ಲಘಟ್ಟ ನಗರದಲ್ಲಿ ನಡೆಯಲಿರುವ ಶ್ರೀರಾಮ ಶೋಭಾಯಾತ್ರೆಯಲ್ಲಿ ಜಾತ್ಯಾತೀತ ಹಾಗೂ ಪಕ್ಷಾತೀತವಾಗಿ ಹಿಂದೂ ಬಾಂಧವರು ಭಾಗವಹಿಸಿ ಶೋಭಾಯಾತ್ರೆಯನ್ನು ಯಶಸ್ವಿಗೊಳಿಸಬೇಕೆಂದು ಶ್ರೀರಾಮ ಶೋಭಾಯಾತ್ರೆ ಆಚರಣಾ ಟ್ರಸ್ಟ್ ನ ಅಧ್ಯಕ್ಷ ಬಿ.ವೆಂಕಟೇಶ್ ಮನವಿ ಮಾಡಿದರು.
ನಗರದ ಬಸ್ ನಿಲ್ದಾಣದ ಬಳಿ ಇರುವ ಶೋಭಾಯಾತ್ರೆ ಕಚೇರಿಯಲ್ಲಿ ಶುಕ್ರವಾರ ಶ್ರೀರಾಮ ಶೋಭಾಯಾತ್ರೆಯ ಬಗ್ಗೆ ಸುದ್ದಿಗೋಷ್ಟಿ ನಡೆಸಿ ಅವರು ಮಾತನಾಡಿದರು.
ನಗರದ ಹೊರವಲಯದ ಹನುಮಂತಪುರ ಗೇಟ್ ಬಳಿ ಇರುವ ಶ್ರೀ ಆಂಜನೇಯಸ್ವಾಮಿ ದೇವಾಲಯದ ಆವರಣದಿಂದ ಜೂನ್ 7 ರಂದು ಬೆಳಗ್ಗೆ 11 ಗಂಟೆಗೆ ಶೋಭಾಯಾತ್ರೆ ಪ್ರಾರಂಭವಾಗಲಿದ್ದು ನಗರದ ಪ್ರಮುಖ ಬೀದಿಗಳಲ್ಲಿ ಶೋಭಾಯಾತ್ರೆಯು ಸಂಚರಿಸಲಿದೆ.
ಶೋಭಾಯಾತ್ರೆಯಲ್ಲಿ ನಾನಾ ಜನಪದ ಕಲಾ ತಂಡಗಳು ಇರಲಿವೆ. 10 ಅಡಿ ಎತ್ತರ ಶ್ರೀರಾಮ ಮೂರ್ತಿ, 10 ಅಡಿ ಉದ್ದದ ಶಿವನ ವಿಗ್ರಹ ಹಾಗೂ ಕುರುಕ್ಷೇತ್ರ ರಥ ಹನುಮ ಮತ್ತು ನರಸಿಂಹಸ್ವಾಮಿಯ ವೇಷಧಾರಿಗಳು, ಕೇರಳದ ಚಂಡೆ ವಾಧ್ಯ ಇನ್ನಿತರೆ ಕಲಾತಂಡಗಳು ಶೋಭಾಯಾತ್ರೆಯ ಆಕರ್ಷಣೆಯಾಗಿ ಇರಲಿದೆ ಎಂದರು.
ಶೋಭಾಯಾತ್ರೆ ಮೆರವಣಿಗೆ ನಂತರ ಬಸ್ ನಿಲ್ದಾಣದ ಬಳಿ ವೇದಿಕೆ ಕಾರ್ಯಕ್ರಮವಿರುತ್ತದೆ. ಮುಖ್ಯ ಭಾಷಣಕಾರರಾಗಿ ಹಾರಿಕಾ ಮಂಜುನಾಥ್ ಹಾಗೂ ರಘು ಸಕಲೇಶಪುರ ಭಾಗವಹಿಸಲಿದ್ದಾರೆ.
ಶ್ರೀರಾಮ ಶೋಭಾಯಾತ್ರೆಯ ಕರಪತ್ರಗಳನ್ನು ಮನೆಮನೆಗೂ ತಲುಪಿಸಲಾಗುವುದು. ಅನೇಕ ಹಳ್ಳಿಗಳಿಂದ ಸ್ವಯಂಪ್ರೇರಿತರಾಗಿ ಪಲ್ಲಕ್ಕಿಗಳನ್ನು ತಂದು ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳುವ ಮೂಲಕ ಹಿಂದೂ ಸಮಾಜದ ಐಕ್ಯತೆ ಕಾಪಾಡಬೇಕು ಎಂದರು.
ಶ್ರೀರಾಮ ಶೋಭಾಯಾತ್ರೆ ಆಚರಣಾ ಟ್ರಸ್ಟ್ ನ ಗೌರವಾಧ್ಯಕ್ಷ ಪ್ರಕಾಶ್, ಉಪಾಧ್ಯಕ್ಷ ಮಂಜುನಾಥ್, ಪ್ರದಾನ ಕಾರ್ಯದರ್ಶಿ ಅನಿಲ್‌ಕುಮಾರ್.ಜಿ.ಕೆ, ಭರತ್, ರವಿಚಂದ್ರ, ನಾಗೇಶ್, ಲಕ್ಷ್ಮೀಪತಿ, ಕಿರಣ್, ರಾಮಾಂಜಿನೇಯ ಹಾಜರಿದ್ದರು.








