Sidlaghatta, Chikkaballapur : ಧಾರ್ಮಿಕ ಕಾರ್ಯಗಳಲ್ಲಿ ಜಾತಿ, ಮತ, ಪಕ್ಷಭೇದ ಮರೆತು ಎಲ್ಲರೂ ಒಗ್ಗೂಡಬೇಕು, ಇದರಿಂದ ಸಮಾಜದಲ್ಲಿ ಸಾಮರಸ್ಯ ಮೂಡಿ ಅಭಿವೃದ್ಧಿಗೆ ದಾರಿ ತೆರೆದಿಡುತ್ತದೆ, ಎಂದು ಸಂಸದ ಎಂ. ಮಲ್ಲೇಶ್ ಬಾಬು ಅವರು ಶಿಡ್ಲಘಟ್ಟದ ನಾಗರಿಕರಿಗೆ ಮನವಿ ಮಾಡಿದರು.
ನಗರದ ಕೋಟೆ ವೃತ್ತದಲ್ಲಿರುವ ಶ್ರೀ ಸೋಮೇಶ್ವರಸ್ವಾಮಿ ದೇವಾಲಯ ಪುನರ್ ನಿರ್ಮಾಣ ಕಾರ್ಯ ಪೂರ್ಣಗೊಂಡು ಜೀರ್ಣೋದ್ಧಾರಕ್ಕೆ ಸಿದ್ದವಾಗುತ್ತಿರುವ ಸಂದರ್ಭದಲ್ಲಿ, ಸಂಸದ ಮಲ್ಲೇಶ್ ಬಾಬು ಅವರು ಕ್ಷೇತ್ರದ ಶಾಸಕ ಬಿ.ಎನ್. ರವಿಕುಮಾರ್ ಅವರೊಂದಿಗೆ ಮಂಗಳವಾರ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಐದು ಲಕ್ಷ ರೂ. ದೇಣಿಗೆ ನೀಡಿದರು.
ಈ ವೇಳೆ ಮಾತನಾಡಿದ ಮಲ್ಲೇಶ್ ಬಾಬು ಅವರು, “ಶಿಡ್ಲಘಟ್ಟ ನಗರದಲ್ಲಿನ ಶತಮಾನಗಳ ಇತಿಹಾಸ ಹೊಂದಿದ ದೇವಾಲಯವನ್ನು ಸುಂದರವಾಗಿ ಪುನರ್ ನಿರ್ಮಾಣ ಮಾಡಿರುವುದು ಶ್ಲಾಘನೀಯ. ಇಂತಹ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ಎಲ್ಲರೂ ಕೈಜೋಡಿಸಿದರೆ, ಸಮಾಜದಲ್ಲಿ ಪ್ರೀತಿ, ಶಾಂತಿ ಮತ್ತು ಏಕತೆ ಮೂಡುತ್ತದೆ,” ಎಂದರು.
ಅವರು ಮುಂದುವರೆದು, “ನಾನು ಕೋಲಾರ ಕ್ಷೇತ್ರದ ಸಂಸದನಾದರೂ, ಶಿಡ್ಲಘಟ್ಟದ ಜನರ ಸಂಪರ್ಕದಲ್ಲಿದ್ದೇನೆ. ಶಾಸಕರಾದ ರವಿ ಅಣ್ಣ ಅವರು ಈ ಭಾಗದ ಎಲ್ಲಾ ಕೆಲಸಗಳನ್ನು ಸಮರ್ಪಕವಾಗಿ ನೋಡಿಕೊಳ್ಳುತ್ತಿದ್ದಾರೆ. ದೇವಾಲಯದ ನಿರ್ಮಾಣಕ್ಕೆ ನನ್ನ ಭಾಗದ ನೆರವನ್ನು ನೀಡಲು ಸಂತೋಷವಾಗುತ್ತಿದೆ,” ಎಂದರು.
ಶಾಸಕ ಬಿ.ಎನ್. ರವಿಕುಮಾರ್ ಮಾತನಾಡಿ, “ಶಿಡ್ಲಘಟ್ಟ ನಗರ ನಿರ್ಮಾತೃ ಅಲಸೂರಮ್ಮ ಹಾಗೂ ಅವರ ಪುತ್ರ ಶಿವನೇಗೌಡ ಅವರ ಕಾಲದಲ್ಲಿ ನಿರ್ಮಾಣವಾದ ಈ ದೇವಾಲಯ ಈಗ ಪುನರ್ ನಿರ್ಮಾಣಗೊಂಡಿದ್ದು, ಎಲ್ಲರ ಸಹಕಾರದಿಂದ ಈ ಪುಣ್ಯ ಕಾರ್ಯ ಸಾಧ್ಯವಾಗಿದೆ,” ಎಂದು ಹೇಳಿದರು.
ಸೋಮೇಶ್ವರಸ್ವಾಮಿ ದೇವಾಲಯ ಅಭಿವೃದ್ದಿ ಸಮಿತಿ ಅಧ್ಯಕ್ಷ ಎ. ನಾಗರಾಜ್ ಅವರು, “ನವೆಂಬರ್ 1ರಿಂದ 3 ದಿನಗಳ ಕಾಲ ದೇವಾಲಯದ ಜೀರ್ಣೋದ್ಧಾರ ಹಾಗೂ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮ ನಡೆಯಲಿದ್ದು, ಸುಮಾರು 5,000 ಭಕ್ತರ ಪಾಲ್ಗೊಳ್ಳುವಿಕೆ ನಿರೀಕ್ಷಿಸಲಾಗಿದೆ. ಎಲ್ಲರಿಗೂ ಪ್ರಸಾದ ಮತ್ತು ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿದೆ,” ಎಂದು ತಿಳಿಸಿದರು.







