
Sidlaghatta : ರೇಷ್ಮೆನಗರ ಶಿಡ್ಲಘಟ್ಟದಲ್ಲಿ ಭಾನುವಾರ ಶ್ರೀರಾಮ ಶೋಭಾಯಾತ್ರೆಯು ಅತ್ಯಂತ ಸಡಗರ, ಸಂಭ್ರಮ ಹಾಗೂ ಭಕ್ತಿಪೂರ್ವಕವಾಗಿ ಜರುಗಿತು. ಹನುಮಂತಪುರ ಗೇಟ್‌ನ ಆಂಜನೇಯಸ್ವಾಮಿ ದೇವಸ್ಥಾನದಿಂದ ಪ್ರಾರಂಭವಾದ ಯಾತ್ರೆಯು ಸಾರಿಗೆ ಬಸ್ ನಿಲ್ದಾಣದವರೆಗೆ ಸಾಗಿದ್ದು, ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಸಹಸ್ರಾರು ಭಕ್ತರು ಪಾಲ್ಗೊಂಡರು.
ಹನುಮಂತಪುರ ಗೇಟ್‌ನಲ್ಲಿರುವ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಯಾತ್ರೆಗೆ ಚಾಲನೆ ನೀಡಲಾಯಿತು. ಯಾತ್ರೆಯಲ್ಲಿ 12 ಅಡಿ ಎತ್ತರದ ಶ್ರೀ ಕೋದಂಡರಾಮನ ಮೂರ್ತಿ ಮತ್ತು 12 ಅಡಿ ಎತ್ತರದ ಶಿವನ ವಿಗ್ರಹದ ರಥಗಳು ವಿಶೇಷ ಆಕರ್ಷಣೆಯಾಗಿದ್ದವು. ಕೇರಳದ ಚಂಡೆ ವಾದ್ಯ, ಸ್ಥಳೀಯ ಟಮಟೆ ಸೇರಿದಂತೆ ವಿವಿಧ ಕಲಾ ತಂಡಗಳ ಪ್ರದರ್ಶನವು ಭಕ್ತರಲ್ಲಿ ಉತ್ಸಾಹವನ್ನು ಹೆಚ್ಚಿಸಿತು. ಕೈಯಲ್ಲಿ ಭಗವಾಧ್ವಜ ಹಿಡಿದ ಭಕ್ತರು ‘ಜೈ ಶ್ರೀರಾಮ್’ ಎಂಬ ಘೋಷಣೆಗಳನ್ನು ಕೂಗುತ್ತಾ ನಗರದ ಪ್ರಮುಖ ರಸ್ತೆಗಳಲ್ಲಿ ಹೆಜ್ಜೆ ಹಾಕಿದರು.
ಯಾತ್ರೆಯುದ್ದಕ್ಕೂ ದಣಿದ ಭಕ್ತರಿಗಾಗಿ ವಿವಿಧ ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರು ಮಜ್ಜಿಗೆ, ನೀರು ಮತ್ತು ತಂಪು ಪಾನೀಯವನ್ನು ವಿತರಿಸಿ ಸೇವೆ ಸಲ್ಲಿಸಿದರು.
ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಶ್ರೀರಾಮ ಶೋಭಾಯಾತ್ರೆ ಆಚರಣಾ ಟ್ರಸ್ಟ್‌ನ ಅಧ್ಯಕ್ಷ ಬಿ. ವೆಂಕಟೇಶ್, ಗೌರವಾಧ್ಯಕ್ಷ ಪ್ರಕಾಶ್, ಉಪಾಧ್ಯಕ್ಷ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಅನಿಲ್‌ಕುಮಾರ್ ಜಿ.ಕೆ., ಭರತ್, ರವಿಚಂದ್ರ, ನಾಗೇಶ್, ಲಕ್ಷ್ಮೀಪತಿ, ಕಿರಣ್, ರಾಮಾಂಜಿನೇಯ ಸೇರಿದಂತೆ ವಿವಿಧ ಹಿಂದೂ ಪರ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸಾವಿರಾರು ಶ್ರೀರಾಮ ಭಕ್ತರು ಪಾಲ್ಗೊಂಡಿದ್ದರು.