Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳ್ಳೂಟಿ ಗೇಟ್ ಹತ್ತಿರದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಮಂಗಳವಾರ ತಾಲ್ಲೂಕು ಮಟ್ಟದ ಆರೋಗ್ಯ ಶಿಬಿರ ನಡೆಯಿತು.
ಶಿಬಿರಕ್ಕೆ ಚಾಲನೆ ನೀಡಿದ ಜಿಲ್ಲಾ ಪಂಚಾಯಿತಿ ಸಿಇಒ ಡಾ. ನವೀನ್ ಭಟ್ ಮಾತನಾಡಿ, “ಸ್ವಚ್ಛ ಚಿಕ್ಕಬಳ್ಳಾಪುರ ನಿರ್ಮಾಣದಲ್ಲಿ ಪ್ರತಿಯೊಬ್ಬರ ಸಹಕಾರ ಅಗತ್ಯ. ಕಸ ಸಂಗ್ರಹಣೆ, ಮೂಲದಲ್ಲೇ ವಿಂಗಡಣೆ ಹಾಗೂ ವಿಲೇವಾರಿ ಬಗ್ಗೆ ಗಂಭೀರವಾಗಿ ಗಮನ ಹರಿಸಬೇಕು. ಕಸದಿಂದ ಸಂಪನ್ಮೂಲ ಸೃಷ್ಟಿಸುವ ದಿಶೆಯಲ್ಲಿ ಕೆಲಸ ಮಾಡುವ ಸಮಯ ಬಂದಿದೆ” ಎಂದರು.
ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಅತೀಕ್ ಪಾಷಾ ಅವರು, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಮೂಲಕ ಸ್ವಚ್ಛ ಹಾಗೂ ಸುಂದರ ವಾತಾವರಣವನ್ನು ನಿರ್ಮಿಸಬೇಕು ಎಂದು ಕರೆ ನೀಡಿದರು. “ಪ್ರತಿ ಮನೆಯಿಂದಲೇ ಸ್ವಚ್ಛತಾ ಚಟುವಟಿಕೆ ಆರಂಭಿಸಿದರೆ, ಸ್ವಚ್ಛ ಗ್ರಾಮದಿಂದ ಸ್ವಚ್ಛ ದೇಶದವರೆಗಿನ ಗುರಿ ಸಾಧಿಸಬಹುದು” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಿಇಒ ಅವರು ಸ್ವಚ್ಛತಾ ಹೀ ಸೇವಾ ಬಗ್ಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ಶಿಬಿರದಲ್ಲಿ ತಾಲ್ಲೂಕಿನ 28 ಗ್ರಾಮ ಪಂಚಾಯಿತಿಗಳ ಸ್ವಚ್ಛತಾಗಾರರು ಮತ್ತು ಸಾರ್ವಜನಿಕರು ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಕಣ್ಣು, ಚರ್ಮ, ಕಿವಿ-ಮೂಗು-ಗಂಟಲು ತೊಂದರೆಗಳು, ಮಾನಸಿಕ ಆರೋಗ್ಯ, ನರರೋಗ, ಮಧುಮೇಹ, ರಕ್ತದೊತ್ತಡ, ಥೈರಾಯ್ಡ್ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಗೆ ಉಚಿತ ತಪಾಸಣೆ ಮತ್ತು ಸಲಹೆಗಳನ್ನು ತಜ್ಞ ವೈದ್ಯರು ನೀಡಿದರು. ಸ್ತ್ರೀರೋಗ ಹಾಗೂ ಪ್ರಸೂತಿ ತಜ್ಞರು ಸಹ ಭಾಗಿಯಾಗಿ ಮಾರ್ಗದರ್ಶನ ಮಾಡಿದರು.
“ಆರೋಗ್ಯವೇ ಮಹಾಭಾಗ್ಯ” ಎಂಬ ಆಶಯದೊಂದಿಗೆ ನಡೆದ ಈ ಶಿಬಿರವನ್ನು ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರ ಸಿಬ್ಬಂದಿ ಸಹಭಾಗಿತ್ವದಲ್ಲಿ ಯಶಸ್ವಿಯಾಗಿ ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಡಾ. ನವೀನ್ ಭಟ್, ಉಪಕಾರ್ಯದರ್ಶಿ ಅತೀಕ್ ಪಾಷಾ, ತಾಲ್ಲೂಕು ಪಂಚಾಯಿತಿ ಇಒ ಹೇಮಾವತಿ, ನರೇಗಾ ಸಹಾಯಕ ನಿರ್ದೇಶಕ ಚಂದ್ರಪ್ಪ, ತಾಲ್ಲೂಕು ಯೋಜನಾಧಿಕಾರಿ ಅನಿಲ್ ಕುಮಾರ್, ಆರೋಗ್ಯಾಧಿಕಾರಿ ಡಾ. ವೆಂಕಟೇಶ್ ಮೂರ್ತಿ, ಆನೂರು ಪಿಡಿಒ ಕಾತ್ಯಾಯಿನಿ, ಸದಸ್ಯ ಆಂಜಿನಪ್ಪ ಹಾಗೂ ಹಲವಾರು ಗ್ರಾಮ ಪಂಚಾಯಿತಿ ಪ್ರತಿನಿಧಿಗಳು ಉಪಸ್ಥಿತರಿದ್ದರು.