Sidlaghatta, chikkaballapur : ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಸಹಯೋಗದಲ್ಲಿ ಮಂಗಳವಾರ ತಾಲ್ಲೂಕು ಪಂಚಾಯಿತಿ ಮಟ್ಟದ ಗ್ರಾಮೀಣ ಮಕ್ಕಳಿಗಾಗಿ ಚತುರ ಆಟಗಳ ಉತ್ಸವವನ್ನು ನಗರದ ಜೂನಿಯರ್ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು.
ತಾಲ್ಲೂಕು ಪಂಚಾಯಿತಿ ಇಒ ಹೇಮಾವತಿ ಅವರು ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆಯ್ಕೆಯಾದ ವಿಜೇತರುಗಳನ್ನು ತಾಲ್ಲೂಕು ಮಟ್ಟದ ಚತುರ ಆಟಗಳ ಸ್ವರ್ಧೆಗಳಲ್ಲಿ ಭಾಗವಹಿಸಿದ್ದಾರೆ. ತಾಲ್ಲೂಕು ಮಟ್ಟದಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಜಿಲ್ಲಾ ಮಟ್ಟಕ್ಕೆ ಆಯ್ಕೆ ಮಾಡಲಾಗುವುದು ಎಂದರು.
ಚದುರಂಗ ಕ್ರೀಡೆ ಬುದ್ಧಿವಂತಿಕೆಯ ಆಟ. ಏಕಾಗ್ರತೆ, ಗುರಿ ತಲುಪುವ ಚಾಕಚಕ್ಯತೆಯನ್ನು ಚೆಸ್ ನಮಗೆ ಕಲಿಸಿಕೊಡುತ್ತದೆ. ಕ್ರೀಡೆಗಳು ನಮ್ಮ ಜೀವನ ಕೌಶಲ್ಯದ ಒಂದು ಪ್ರಮುಖ ಭಾಗವಾಗಿದೆ. ಇದು ದೈಹಿಕವಾಗಿ ಮತ್ತು ಮಾನಸಿಕವಾಗಿ ನಮ್ಮ ಅಭಿವೃದ್ಧಿಯ ಮೂಲವಾಗಿದೆ. ಯಶಸ್ವಿ ವ್ಯಕ್ತಿಯು ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯವಾಗಿರಲು ಕ್ರೀಡೆಗಳು ಅವಶ್ಯ ಎಂದರು.
ತಾಲ್ಲೂಕು ಮಟ್ಟದ ಗ್ರಾಮೀಣ ಮಕ್ಕಳಿಗಾಗಿ ನಡೆದ ಚತುರ ಆಟಗಳ ಉತ್ಸವದಲ್ಲಿ ಚೆಸ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ತಿಮ್ಮನಾಯಕನಹಳ್ಳಿ ಗ್ರಾಮ ಪಂಚಾಯಿತಿಯ ಕುದುಪಕುಂಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಶಾಂಕ್, ದ್ವಿತೀಯ ಸ್ಥಾನ ನಾಗಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಡಿಪಿನಾಯಕನಹಳ್ಳಿ ಗ್ರಾಮದ ನವೋದಯ ವಿದ್ಯಾಲಯದ ಶ್ರೀನಿವಾಸ್, ತೃತೀಯ ಸ್ಥಾನ ನಡಿಪಿನಾಯಕನಹಳ್ಳಿ ಗ್ರಾಮದ ನವೋದಯ ವಿದ್ಯಾಲಯದ ಹರ್ಷವರ್ಧನ್ ಪಡೆದರು.
ಕೇರಂ ಸ್ಪರ್ಧೆಯಲ್ಲಿ ಕೊತ್ತನೂರು ಗ್ರಾಮ ಪಂಚಾಯಿತಿ ನಿಖಿಲ್ ಪ್ರಥಮ ಸ್ಥಾನ, ಜಂಗಮಕೋಟೆ ಗ್ರಾಮ ಪಂಚಾಯಿತಿಯ ರಿಷಿ ದ್ವಿತೀಯ ಸ್ಥಾನ, ಚೀಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಹೇಶ್ ಕುಮಾರ್ ತೃತೀಯ ಸ್ಥಾನ ಪಡೆದರು. ಗ್ರಾಮೀಣ ಮಕ್ಕಳಿಗಾಗಿ ಚತುರ ಆಟಗಳ ಸ್ವರ್ಧೆಗಳಲ್ಲಿ ವಿಜೇತರಿಗೆ ನರೇಗಾ ಸಹಾಯಕ ನಿರ್ದೇಶಕ ಚಂದ್ರಪ್ಪ ಬಹುಮಾನ ಮತ್ತು ಪ್ರಮಾಣ ಪತ್ರವನ್ನು ವಿತರಿಸಿದರು.
ತಾಲ್ಲೂಕು ಪಂಚಾಯಿತಿ ಇಒ ಹೇಮಾವತಿ, ನರೇಗಾ ಸಹಾಯಕ ನಿರ್ದೇಶಕ ಚಂದ್ರಪ್ಪ, ತಾಲ್ಲೂಕು ವ್ಯವಸ್ಥಾಪಕ ತನ್ವೀರ್ ಅಹಮದ್, ತಾಲ್ಲೂಕು ದೈಹಿಕ ಪರಿವೀಕ್ಷಕ ದೇವೇಂದ್ರ, ತಾಲ್ಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಕಾಶ್ ಬಾಬು ಕೆ.ವಿ, ಸರ್ಕಾರಿ ಪ್ರೌಢಶಾಲಾ ದೈಹಿಕ ಶಿಕ್ಷಕಿ ಅನ್ನಪೂರ್ಣ, ಶಿಕ್ಷಕರಾದ ಚಂದ್ರಕಲಾ, ಮಂಜುಳಾ, ವೆಂಕಟಸ್ವಾಮಿ, ಮಂಜುನಾಥ, ದೇವಮ್ಮ, ಅಮರನಾಥ್, ತಾಲ್ಲೂಕು ಪಂಚಾಯಿತಿ ಸಿಬ್ಬಂದಿ, ಸರ್ಕಾರಿ ಶಾಲಾ ಮಕ್ಕಳು, ಗ್ರಂಥಪಾಲಕರು ಹಾಜರಿದ್ದರು.








