Sidlaghatta : SSLC ಪರೀಕ್ಷೆಯಲ್ಲಿ ಯಾವ ಸರ್ಕಾರಿ ಶಾಲೆಯ ವಿದ್ಯಾರ್ಥಿ ತಾಲ್ಲೂಕಿಗೆ ಹೆಚ್ಚು ಅಂಕ ಗಳಿಸುವರೋ ಆ ಶಾಲೆಯ ಶಿಕ್ಷಕರನ್ನು ಮುಂದಿನ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ಸೂಕ್ತ ಬಹುಮಾನದೊಂದಿಗೆ ಸನ್ಮಾನಿಸುವುದಾಗಿ ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.
ನಗರದ ಹೊರವಲಯದ ಬಾಲಾಜಿ ಕನ್ವೆನ್ಷನ್ ಹಾಲ್ ನಲ್ಲಿ ಶನಿವಾರ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ ಮತ್ತು ಶಿಕ್ಷಣ ಇಲಾಖೆ ವತಿಯಿಂದ ನಡೆದ ಭಾರತರತ್ನ ಡಾ.ಎಸ್.ರಾಧಾಕೃಷ್ಣನ್ ಜನ್ಮದಿನೋತ್ಸವ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತಾಲ್ಲೂಕಿನ 17 ಸರ್ಕಾರಿ ಪ್ರೌಢಶಾಲೆಗಳಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆಯುವ ವಿದ್ಯಾರ್ಥಿಗೆ ಒಂದು ಲಕ್ಷ ರೂ, ಎರಡನೇ ಸ್ಥಾನ ಪಡೆದ ವಿದ್ಯಾರ್ಥಿಗೆ 50 ಸಾವಿರ ರೂ ಮತ್ತು ಮೂರನೇ ಸ್ಥಾನ ಪಡೆದ ವಿದ್ಯಾರ್ಥಿಗೆ 25 ಸಾವಿರ ರೂ ಬಹುಮಾನವಾಗಿ ನೀಡಲಾಗುವುದು. ಈ ಪ್ರೋತ್ಸಾಹದ ಹಿಂದಿನ ಉದ್ದೇಶ ನಮ್ಮ ಕ್ಷೇತ್ರ ಶೈಕ್ಷಣಿಕವಾಗಿ ಜಿಲ್ಲೆಗೆ ಮತ್ತು ರಾಜ್ಯಕ್ಕೆ ಪ್ರಥಮಸ್ಥಾನ ಪಡೆಯಬೇಕೆಂಬುದಾಗಿದೆ ಎಂದು ಹೇಳಿದರು.
ಸಂಸದ ಮಲ್ಲೇಶ್ ಬಾಬು ಮಾತನಾಡಿ, ತಮ್ಮ ಸಂಸದರ ನಿಧಿಯಿಂದ ನೌಕರರ ಭವನ ಮತ್ತು ಗುರುಭವನಕ್ಕೆ ತಲಾ 25 ಲಕ್ಷ ರೂ ನೀಡುವುದಾಗಿ ಪ್ರಕಟಿಸಿ, ಶಿಕ್ಷಕರ ವೃತ್ತಿ ಕಠಿಣವಾದದ್ದು, ತಾಳ್ಮೆ, ಕಠಿಣ ಪರಿಶ್ರಮ ಮತ್ತು ದೃಢನಿಶ್ಚಯದಿಂದ ಕರ್ತವ್ಯವನ್ನು ನಿರ್ವಹಿಸಬೇಕೆಂದರು.
ತುಮಕೂರು ಜಿಲ್ಲೆಯ ಜ್ಞಾನಜ್ಯೋತಿ ರಾಷ್ಟ್ರೀಯ ವಿದ್ಯಾಲಯದ ಪ್ರಾಂಶುಪಾಲ ಸಿ.ವಿ.ಎನ್.ಮೂರ್ತಿ ಮುಖ್ಯ ಭಾಷಣಕಾರರಾಗಿ ಮಾತನಾಡಿ, ಪ್ರತಿಯೊಂದು ಮಗುವಿಗೂ ಹತ್ತನೇ ತರಗತಿಯವರೆಗೂ ಉಚಿತ ಮತ್ತು ಸಮಾನ ಶಿಕ್ಷಣ ಸಿಗದಿದ್ದಲ್ಲಿ ಅದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡುವ ದ್ರೋಹವಾಗುತ್ತದೆ. ಶಿಕ್ಷಣವೆಂದರೆ ಅಂಕಗಳಿಕೆಯ ಕಾರ್ಖಾನೆಯಲ್ಲ, ಸಂಸ್ಕಾರ ಸಿಗುವ ದೇಗುಲ. ಶ್ರೇಷ್ಠ ಶಿಕ್ಷಕರಿಂದ ಶ್ರೇಷ್ಠ ಸಮಾಜ ನಿರ್ಮಾಣ ಸಾಧ್ಯ. ಶಿಕ್ಷಕರ ದಿನಾಚರಣೆಯು ಚಿಂತನ, ಮಂಥನ, ಆತ್ಮಾವಲೋಕಿತ ಸಂಕಲ್ಪ ಕಾರ್ಯಕ್ರಮ ಎಂದು ಹೇಳಿದರು.
ನಿವೃತ್ತ ಶಿಕ್ಷಕರು, ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕರು ಮತ್ತು ಅನುದಾನ ರಹಿತ ಶಾಲೆಗಳ ಶಿಕ್ಷಕರನ್ನು ಸನ್ಮಾನಿಸಲಾಯಿತು.
ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಬಂಕ್ ಮುನಿಯಪ್ಪ, ನಗರಸಭೆ ಅಧ್ಯಕ್ಷ ಎಂ.ವಿ.ವೆಂಕಟಸ್ವಾಮಿ, ಹಂಡಿಗನಾಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವೆಂಕಟಲಕ್ಷ್ಮಮ್ಮ, ತಹಶೀಲ್ದಾರ್ ಎನ್.ಗಗನಸಿಂಧು, ತಾಲ್ಲೂಕು ಪಂಚಾಯಿತಿ ಇಒ ಆರ್.ಹೇಮಾವತಿ, ಕ್ಷೇತ್ರ ಶಿಕ್ಷಣಾಧಿಕಾರಿ ನರೇಂದ್ರಕುಮಾರ್, ನಗರಸಭೆ ಪೌರಾಯುಕ್ತೆ ಜಿ.ಅಮೃತ, ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಕೆ.ಎನ್.ಸುಬ್ಬಾರೆಡ್ಡಿ, ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಮೇಲೂರು ಮಂಜುನಾಥ್, ಜಿಲ್ಲಾ ಸಫಾಯಿ ಕರ್ಮಚಾರಿ ಸಮಿತಿ ಸದಸ್ಯ ಲಕ್ಷ್ಮಣರಾಜು ಹಾಜರಿದ್ದರು.
ಶಿಡ್ಲಘಟ್ಟದ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಈಗ ಚೇಳೂರು ತಹಶೀಲ್ದಾರ್
ಕೆ.ಶ್ವೇತಾ ಅವರು ಶಿಡ್ಲಘಟ್ಟ ತಾಲ್ಲೂಕಿನ ಬಸವಾಪಟ್ಟಣದ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಭಕ್ತರಹಳ್ಳಿಯ ಬಿ.ಎಂ.ವಿ.ಶಾಲೆಯಲ್ಲಿ ಪ್ರೌಢಶಿಕ್ಷಣ, ವಿಜಯಪುರ ನಂದಿನಿ ಕಾಲೇಜಿನಲ್ಲಿ ಪಿಯುಸಿ, ಚಿಕ್ಕಬಳ್ಳಾಪುರದ ಕೆ.ವಿ.ಕಾಲೇಜಿನಲ್ಲಿ ಬಿ.ಫಾರಮ್, ಎಂ.ಫಾರಮ್, 2017-18 ರಲ್ಲಿ ಕೆ.ಎ.ಎಸ್ ನಲ್ಲಿ ರಾಜ್ಯಕ್ಕೆ ಐದನೇ ರ್ಯಾಂಕ್ ಪಡೆದಿರುವರು.